ಮಣಿಪಾಲ: ಇಲ್ಲಿನ ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಕಾಲೇಜಿನ ಮಹಿಳಾ ಹಾಸ್ಟೆಲ್ನಲ್ಲಿ ಬಿ.ಟೆಕ್ ಮೂರನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಮೃತ ವಿದ್ಯಾರ್ಥಿನಿಯನ್ನು 21 ವರ್ಷದ ಶ್ರೀಯಾ ಪರ್ಗಿ ಎಂದು ಗುರುತಿಸಲಾಗಿದೆ. ಇವರು ಎಂಐಟಿ ಕಾಲೇಜಿನ ನಾಲ್ಕನೇ ಮಹಡಿಯಲ್ಲಿರುವ 434ನೇ ಕೊಠಡಿಯಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಅವರೊಂದಿಗೆ ವಾಸವಾಗಿದ್ದರು. ಪ್ರಸ್ತುತ ಇನ್ನೊಬ್ಬ ವಿದ್ಯಾರ್ಥಿನಿ ರಜೆಯಲ್ಲಿದ್ದರು ಎನ್ನಲಾಗಿದೆ.

ನವೆಂಬರ್ 10ರಂದು ರಾತ್ರಿ ಶ್ರೀಯಾ ಅವರು ಬಯೋಮೆಟ್ರಿಕ್ ಹಾಜರಾತಿ ದಾಖಲಿಸಿ ತಮ್ಮ ಕೊಠಡಿಗೆ ತೆರಳಿದ್ದರು. ಆದರೆ ನವೆಂಬರ್ 11ರಂದು ಅವರು ಮೊಬೈಲ್ ಕರೆ ಸ್ವೀಕರಿಸದೆ, ಕೊಠಡಿಯ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ಅನುಮಾನಗೊಂಡ ಕೇರ್ಟೇಕರ್ ಶಾಲಿನಿ ಶೆಟ್ಟಿ ಅವರು ಸ್ಪೇರ್ ಕೀ ಬಳಸಿ ಬಾಗಿಲು ತೆರೆಯಲು
ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ನಂತರ ಕ್ಯಾಂಪಸ್ ಪೆಟ್ರೋಲ್ ಸಿಬ್ಬಂದಿಯನ್ನು ಕರೆಸಿ ಬಾಗಿಲಿನ ಚಿಲಕವನ್ನು ತೆರೆಯಲಾಗಿದ್ದು, ಈ ವೇಳೆ ಕೊಠಡಿಯೊಳಗೆ ಶ್ರೀಯಾ ಅವರು ಫ್ಯಾನಿನ ಹುಕ್ಗೆ ಸೀರೆಯಿಂದ
ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಈ ಸಂಬಂಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 57/2026ರಂತೆ ಬಿಎನ್ಎಸ್ಎಸ್ ಕಲಂ 194ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ
ಕೈಗೊಂಡಿದ್ದಾರೆ.





