“ಶ್ರೀ ಕ್ಷೇತ್ರ ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ಮತ್ತೆ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆಯೇ? ಅಸಹಜ ಸಾವುಗಳ ಅಂಕಿ-ಅಂಶಗಳನ್ನು ಐದು ಪಟ್ಟು ಹೆಚ್ಚಿಸಿ, ಸರ್ಕಾರ ಮತ್ತು ಜನರ ದಾರಿ ತಪ್ಪಿಸಲಾಗುತ್ತಿದೆಯೇ? ಈಗ ಕ್ಷೇತ್ರದ ಹಿತಚಿಂತಕರು ಬಿಡುಗಡೆ ಮಾಡಿರುವ ಆರ್ಟಿಐ (RTI) ದಾಖಲೆಗಳು ಬೇರೆಯದೇ ಸತ್ಯವನ್ನು ಹೇಳುತ್ತಿವೆ!”

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಸ್ಥಳದ ವಿರುದ್ಧ ಮತ್ತೆ ಅಪಪ್ರಚಾರದ ಅಲೆ ಎದ್ದಿದೆ. ಬೆಳ್ತಂಗಡಿ ತಾಲೂಕಿನಾದ್ಯಂತ ನಡೆದಿರುವ ಅಸಹಜ ಸಾವುಗಳ (UDR) ಪ್ರಕರಣಗಳನ್ನು ಕೇವಲ ಧರ್ಮಸ್ಥಳ ಕ್ಷೇತ್ರಕ್ಕೆ ತಳಕು ಹಾಕಿ, ಸುಳ್ಳು ಮಾಹಿತಿ ಹರಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಯಾವುದೇ ದೊಡ್ಡ ಧಾರ್ಮಿಕ ಕ್ಷೇತ್ರ ಅಥವಾ ಪ್ರವಾಸಿ ತಾಣಗಳಿಗೆ ಲಕ್ಷಾಂತರ ಜನರು ಬಂದು ಹೋಗುವುದರಿಂದ, ಅಲ್ಲಿ ಅಸಹಜ ಸಾವುಗಳು (UDR) ವರದಿಯಾಗುವುದು ಸಹಜ ಪ್ರಕ್ರಿಯೆ. ಪೊಲೀಸ್ ಇಲಾಖೆಯ ಗಣಕೀಕೃತ ದಾಖಲೆಗಳ ಪ್ರಕಾರ, 2016ರಿಂದ 2025ರ ಅವಧಿಯಲ್ಲಿ ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ದಾಖಲಾದ UDR ಪ್ರಕರಣಗಳ ಸಂಖ್ಯೆಯನ್ನು ಗಮನಿಸಿದರೆ ಅಸಲಿ ಸತ್ಯ ತಿಳಿಯುತ್ತದೆ:
ನಂಜನಗೂಡು: 550 ಪ್ರಕರಣಗಳು
ಕುಕ್ಕೆ ಸುಬ್ರಹ್ಮಣ್ಯ: 357 ಪ್ರಕರಣಗಳು
ಧರ್ಮಸ್ಥಳ: 328 ಪ್ರಕರಣಗಳು
ಮುರುಡೇಶ್ವರ: 276 ಪ್ರಕರಣಗಳು
ಗೋಕರ್ಣ: 256 ಪ್ರಕರಣಗಳು

ಇತರ ಕ್ಷೇತ್ರಗಳಿಗೆ ಹೋಲಿಸಿದರೆ ಧರ್ಮಸ್ಥಳದ ಅಂಕಿ-ಅಂಶ ಕಡಿಮೆಯಿದ್ದರೂ, ಕೇವಲ ಧರ್ಮಸ್ಥಳವನ್ನೇ ಗುರಿಯಾಗಿಸಿಕೊಂಡು ಅಪಪ್ರಚಾರ ನಡೆಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಇದೇ ಸುಳ್ಳು ಮಾಹಿತಿಯನ್ನು ಮುಂದಿಟ್ಟುಕೊಂಡು ಮಹಿಳಾ ಆಯೋಗವನ್ನೂ ದಾರಿ ತಪ್ಪಿಸಲಾಗಿದೆ ಎಂದು ಕ್ಷೇತ್ರದ ಹಿತಚಿಂತಕರು ಕಿಡಿಕಾರಿದ್ದಾರೆ.
ಇದೀಗ ತಾಲೂಕಿನ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲು ಹೊರಟಿರುವ ವ್ಯಕ್ತಿಯ ಹಿನ್ನೆಲೆ ಮತ್ತು ಉದ್ದೇಶದ ಬಗ್ಗೆಯೂ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ರೀತಿಯ ನಿರಂತರ ಅಪಪ್ರಚಾರದಿಂದ ಕ್ಷೇತ್ರವನ್ನು ನಂಬಿ ಬದುಕುತ್ತಿರುವ ಸಾವಿರಾರು ಸಾಮಾನ್ಯ ಜನರ ಆರ್ಥಿಕ ಸ್ಥಿತಿಯ ಮೇಲೆ ನೇರ ಹೊಡೆತ ಬೀಳುತ್ತಿದೆ.






ಹೀಗಾಗಿ, “ಸಜ್ಜನರ ಮೌನವನ್ನು ದೌರ್ಬಲ್ಯ ಎಂದು ಭಾವಿಸಬೇಡಿ” ಎನ್ನುತ್ತಿರುವ ಸ್ಥಳೀಯರು, ಇನ್ನಾದರೂ ಒಗ್ಗಟ್ಟಾಗಿ ಸಭೆ ಸೇರಿ, ಸುಳ್ಳು ಹಬ್ಬಿಸುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಾನೂನು ಹೋರಾಟ ನಡೆಸಲು ಮುಂದಾಗಿದ್ದಾರೆ.





