ಮಂಗಳೂರು, ನ. 17: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೈಲಟ್ನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ಭಾರೀ ವಿಮಾನ ದುರಂತವೊಂದು ಕೊನೆಯ ಕ್ಷಣದಲ್ಲಿ ತಪ್ಪಿದೆ.

ಬೆಂಗಳೂರಿಗೆ ಹೊರಟಿದ್ದ ಇಂಡಿಗೋ (IndiGo) ವಿಮಾನದಲ್ಲಿ ಟೇಕ್ಆಫ್ಗೆ ಕೆಲವೇ ಕ್ಷಣಗಳಿರುವಾಗ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ತಕ್ಷಣ ತುರ್ತು ಬ್ರೇಕ್ ಹಾಕಿ ವಿಮಾನವನ್ನು ರನ್ವೇಯಲ್ಲೇ ನಿಲ್ಲಿಸಿದ್ದಾರೆ. ಈ ಮೂಲಕ ವಿಮಾನದಲ್ಲಿದ್ದ 229 ಪ್ರಯಾಣಿಕರು ಹಾಗೂ 7 ಮಂದಿ ಸಿಬ್ಬಂದಿ ಸೇರಿದಂತೆ ಒಟ್ಟು 236 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:
ಸೋಮವಾರ (ನ. 16) ಸಂಜೆ 6:10ಕ್ಕೆ ಮಂಗಳೂರಿನಿಂದ ಬೆಂಗಳೂರಿಗೆ ತೆರಳಲು ಇಂಡಿಗೋ ವಿಮಾನ ರನ್ವೇಯಲ್ಲಿ ವೇಗವಾಗಿ ಚಲಿಸುತ್ತಿತ್ತು. ವಿಮಾನ ಟೇಕ್ಆಫ್ ಆಗಲು ಕೇವಲ 100 ಮೀಟರ್ ಅಂತರವಿರುವಾಗ, ವಿಮಾನದ ತಳಭಾಗದಲ್ಲಿ ಬೆಂಕಿಯ ಕಿಡಿ (ಸ್ಪಾರ್ಕ್) ಕಾಣಿಸಿಕೊಂಡಿದೆ. ತಕ್ಷಣ ಅಪಾಯವನ್ನು ಗ್ರಹಿಸಿದ ಪೈಲಟ್, ತುರ್ತು ಬ್ರೇಕ್ ಹಾಕಿ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ರನ್ವೇಯಲ್ಲೇ ನಿಲ್ಲಿಸಿದ್ದಾರೆ. ತುರ್ತು ಬ್ರೇಕ್ ಹಾಕಿದ ಪರಿಣಾಮ ವಿಮಾನದ ಒಂದು ಚಕ್ರ ಒಡೆದಿದೆ ಎಂದು ತಿಳಿದುಬಂದಿದೆ.
ಪರ್ಯಾಯ ವ್ಯವಸ್ಥೆ:
ಘಟನೆಯ ಬೆನ್ನಲ್ಲೇ ವಿಮಾನವನ್ನು ಸುರಕ್ಷಿತವಾಗಿ ನಿಲ್ದಾಣದ ‘ಬೇ’ (Bay) ಪ್ರದೇಶಕ್ಕೆ ವಾಪಸ್ ತರಲಾಯಿತು. ವಿಮಾನ ನಿಲ್ದಾಣದ ಸಿಬ್ಬಂದಿ ಹಾಗೂ ಇಂಡಿಗೋ ಸಂಸ್ಥೆಯವರು ಪ್ರಯಾಣಿಕರಿಗೆ ಅಗತ್ಯ ನೆರವು ಮತ್ತು ವಿಶ್ರಾಂತಿ ವ್ಯವಸ್ಥೆ ಕಲ್ಪಿಸಿದರು. ಬಳಿಕ ರಾತ್ರಿ 11:30ಕ್ಕೆ ಬದಲಿ ವಿಮಾನದ ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಯಿತು.
ವಿಮಾನದಲ್ಲಿದ್ದರು ಹಲವು ಗಣ್ಯರು:
ಈ ವಿಮಾನದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕಿ ಮಂಜುಳಾ ಎಸ್. ಅರವಿಂದ ಲಿಂಬಾವಳಿ, ಹೈಕೋರ್ಟ್ ನ್ಯಾಯಾಧೀಶರಾದ ರಾಜೇಶ್ ರೈ ಸೇರಿದಂತೆ ಹಲವು ಗಣ್ಯರು ಹಾಗೂ ಬೆಂಗಳೂರಿನಿಂದ ವಿದೇಶಕ್ಕೆ ತೆರಳಬೇಕಿದ್ದ ಪ್ರಯಾಣಿಕರು ಇದ್ದರು.

ಎಮರ್ಜೆನ್ಸಿ ಬಾಗಿಲಿನ ಸಮೀಪದಲ್ಲೇ ಕುಳಿತಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಘಟನೆಯ ಕುರಿತು ಪ್ರತಿಕ್ರಿಯಿಸಿ, “ಪೈಲಟ್ನ ಸಮಯಪ್ರಜ್ಞೆಯಿಂದ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ನೂರಾರು ದೇವಸ್ಥಾನಗಳ ಬ್ರಹ್ಮಕಲಶೋತ್ಸವದಂತಹ ಪುಣ್ಯ ಕಾರ್ಯಗಳಲ್ಲಿ ಭಾಗಿಯಾದ ಪುಣ್ಯವೇ ನಮ್ಮನ್ನು ಇಂದು ಕಾಪಾಡಿದೆ” ಎಂದು ತಮ್ಮ ಆಪ್ತರ ಬಳಿ ಸಂತಸ ಹಾಗೂ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಪೈಲಟ್ ಕಾರ್ಯಕ್ಕೆ ಶ್ಲಾಘನೆ:
ಒಂದು ವೇಳೆ ಪೈಲಟ್ ತಕ್ಷಣ ಬ್ರೇಕ್ ಹಾಕದೆ ವಿಮಾನ ಟೇಕ್ಆಫ್ ಆಗಿದ್ದರೆ ದೊಡ್ಡ ಮಟ್ಟದ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು. ಕೆಲಕಾಲ ವಿಮಾನದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಪೈಲಟ್ ತೋರಿದ ಧೈರ್ಯ ಮತ್ತು ಸಮಯಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.





