ಉಜಿರೆ: ತುಳು ಭಾಷೆಗೆ ಐತಿಹಾಸಿಕ ಮಾನ್ಯತೆ ದೊರೆತಿರುವುದು ತುಳುನಾಡಿನ ಭಾಷೆ, ಸಂಸ್ಕೃತಿ, ಆಚಾರ-ವಿಚಾರ ಹಾಗೂ ಪರಂಪರೆಗೆ ಸಿಕ್ಕ ದೊಡ್ಡ ಗೌರವವಾಗಿದೆ ಎಂದು ‘ಬದುಕು ಕಟ್ಟೋಣ ಬನ್ನಿ’ ತಂಡದ ಸಂಚಾಲಕ ಹಾಗೂ ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಹೇಳಿದ್ದಾರೆ. ಈ ಮಾನ್ಯತೆಯು ಕರಾವಳಿಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿ ಎಂದು ಅವರು ಆಶಯ ವ್ಯಕ್ತಪಡಿಸಿದರು.

ತುಳುನಾಡಿನ ಯಕ್ಷಗಾನ, ಕಂಬಳ, ನೇಮ, ದೈವಾರಾಧನೆ ಹಾಗೂ ನಾಗಾರಾಧನೆಯಂತಹ ವಿಶಿಷ್ಟ ಕಲೆ ಮತ್ತು ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ನಡೆದ ವಿಶ್ವ ತುಳು ಸಮ್ಮೇಳನಗಳು ಮಹತ್ವದ ಪಾತ್ರ ವಹಿಸಿವೆ ಎಂದು ಮೋಹನ್ ಕುಮಾರ್ ಸ್ಮರಿಸಿದರು.


ಇದೇ ವೇಳೆ, ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯಕ್ಷಗಾನ, ನಾಟಕ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರಾತ್ರಿ ವೇಳೆಯಲ್ಲಿ ನಡೆಸಲು ಅಗತ್ಯ ಅನುಮತಿ ಮತ್ತು ಸೂಕ್ತ ಅವಕಾಶ ಕಲ್ಪಿಸಬೇಕು. ಇದರಿಂದ ಕಲಾವಿದರಿಗೆ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಉತ್ತೇಜನ ಸಿಗಲಿದೆ ಎಂದು ಎಂದು ಕೆ.ಮೋಹನ್ ಕುಮಾರ್ ಹೇಳಿದರು.





