ಉಜಿರೆ: ಪ್ರಾಮಾಣಿಕತೆ, ಶಿಸ್ತು, ಸರಳತೆ ಮತ್ತು ಸೇವಾ ಮನೋಭಾವಕ್ಕೆ ಸಾಟಿಯಿಲ್ಲದ ಹೆಸರು — ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ. ಉಜಿರೆ, ಚಾರ್ಮಾಡಿ ಹಾಗೂ ಲ್ಯಾಲ ಗ್ರಾಮ ಪಂಚಾಯತ್ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸುದೀರ್ಘ ಸೇವೆ ಸಲ್ಲಿಸಿ, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದ ದಕ್ಷ ಅಧಿಕಾರಿ ಪಿ.ಹೆಚ್. ಪ್ರಕಾಶ್ ಶೆಟ್ಟಿ ನೊಚ್ಚ ಅವರು ಸೆಪ್ಟೆಂಬರ್ 30ರಂದು ಸೇವೆಯಿಂದ ನಿವೃತ್ತಿ ಹೊಂದಲಿದ್ದಾರೆ.

ವೃತ್ತಿರಂಗದ ಅಪೂರ್ವ ಸಾಧನೆ:
ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಲಾಯಿಲ ಹಾಗೂ ಚಾರ್ಮಾಡಿ ಗ್ರಾಮ ಪಂಚಾಯತ್ಗಳಲ್ಲಿ ನೀವು ಸಲ್ಲಿಸಿದ ಸೇವೆ ಅತ್ಯದ್ಭುತ. ಲಾಯಿಲ ಗ್ರಾಮ ಪಂಚಾಯತ್ಗೆ ರಾಜ್ಯದಲ್ಲೇ ಏಕೈಕ ISO ಮಾನ್ಯತೆ ದೊರಕಿಸಿಕೊಟ್ಟ ಕೀರ್ತಿ ನಿಮಗಲ್ಲದೇ ಮತ್ಯಾರಿಗೂ ಸಲ್ಲದು. ಕಸದಿಂದ ರಸ ತೆಗೆದು “ಲಾಯಿಲ ಗೋಲ್ಡ್” ಹೆಸರಿನ ಸಾವಯವ ಗೊಬ್ಬರವನ್ನು ಮಾರುಕಟ್ಟೆಗೆ ಪರಿಚಯಿಸಿದ ನಿಮ್ಮ ಪರಿಸರ ಪ್ರೇಮ ಹಾಗೂ ತಾಂತ್ರಿಕ ಆಲೋಚನೆ ಮಾದರಿಯಾದದ್ದು.
ನಿಮ್ಮ ದಕ್ಷ ಸೇವೆಗೆ ರಾಷ್ಟ್ರೀಯ ಗೌರವ ಗ್ರಾಮ ಸಭಾ ಪುರಸ್ಕಾರ, ರಾಜ್ಯ ನೈರ್ಮಲ್ಯ ಪುರಸ್ಕಾರ, ಗಾಂಧಿ ಗ್ರಾಮ ಪುರಸ್ಕಾರ, ಕೋಟ ಶಿವರಾಮ ಕಾರಂತ ಪ್ರಶಸ್ತಿ, ಪರಿಸರ ಪ್ರಶಸ್ತಿ (2015), ಗಾಡ್ಫ್ರೆ ಫಿಲಿಪ್ಸ್ ಬ್ರೇವರಿ ಅವಾರ್ಡ್, ಜಿಲ್ಲಾ ರಾಜ್ಯೋತ್ಸವ ನಾಗರಿಕ ಸೇವಾ ಪ್ರಶಸ್ತಿ, ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಹಾಗೂ ಸ್ವಚ್ಛತಾ ಸೇವಾ ಹೀ ಪ್ರಶಸ್ತಿಗಳು ಹುಡುಕಿಕೊಂಡು ಬಂದಿರುವುದು ನಿಮ್ಮ ಕಾಯಕ ನಿಷ್ಠೆಗೆ ಸಾಕ್ಷಿ.
ಸಾಮಾಜಿಕ ಹಾಗೂ ಧಾರ್ಮಿಕ ಸೇವೆ:
ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿ ಸುಮಾರು ₹60 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ ಮಾಡಿ, ಗತ 15 ವರ್ಷಗಳಿಂದ ಆಡಳಿತ ಸಮಿತಿ ಅಧ್ಯಕ್ಷರಾಗಿ ಧಾರ್ಮಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದೀರಿ. ಧಾರ್ಮಿಕ ಭಾಷಣಕಾರರಾಗಿ 250ಕ್ಕೂ ಹೆಚ್ಚು ವೇದಿಕೆಗಳಲ್ಲಿ ಜನರಲ್ಲಿ ಸನ್ಮಾರ್ಗದ ಅರಿವು ಮೂಡಿಸಿದ್ದೀರಿ. ಲಯನ್ಸ್ ಕ್ಲಬ್ನ ಅಧ್ಯಕ್ಷರಾಗಿ, ವಲಯಾಧ್ಯಕ್ಷರಾಗಿ, ಪ್ರಾಂತ್ಯಾಧ್ಯಕ್ಷರಾಗಿ ಹಾಗೂ ಜಿಲ್ಲಾ ಸಂಯೋಜಕರಾಗಿ ನೀಡಿದ ನಾಯಕತ್ವ ಅಪರಂಪಾರ. ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಯಾಗಿ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ಸರಕಾರಿ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ನೌಕರರ ಮತ್ತು ಸರಕಾರದ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಲೆ ಮತ್ತು ಕೃಷಿ ಸಂಗಮ:
100ಕ್ಕೂ ಹೆಚ್ಚು ತುಳು ನಾಟಕ, ಪೌರಾಣಿಕ ನಾಟಕ ಹಾಗೂ ಯಕ್ಷಗಾನಗಳಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸಿ ಸಾಂಸ್ಕೃತಿಕ ಕ್ಷೇತ್ರದಲ್ಲೂ ನಿಮ್ಮ ಛಾಪನ್ನು ಮೂಡಿಸಿದ್ದೀರಿ. ಅಷ್ಟೇ ಅಲ್ಲದೆ, ಪ್ರಗತಿಪರ ಅಡಿಕೆ ಕೃಷಿಕರಾಗಿ, ಕಳೆದ 20 ವರ್ಷಗಳಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ದಿನಂಪ್ರತಿ 50 ರಿಂದ 100 ಲೀಟರ್ ಹಾಲನ್ನು ಸರಬರಾಜು ಮಾಡುತ್ತಾ ‘ಶ್ರಮವೇ ಜೀವನ’ ಎಂಬುದನ್ನು ನಿರೂಪಿಸಿದ್ದಾರೆ.
ದರ್ಬೆ ಪಳ್ಳತ್ತಡ್ಕದ ದಿವಂಗತ ನಾರಾಯಣ ಶೆಟ್ಟಿ ಹಾಗೂ ಶ್ರೀಮತಿ ಲಕ್ಷ್ಮೀ ಎನ್. ಶೆಟ್ಟಿ ದಂಪತಿಯ ಪುತ್ರರಾಗಿ ಜನಿಸಿದ ಇವರು, ಬೆಳ್ತಂಗಡಿ ಸರ್ಕಾರಿ ಕಾಲೇಜು ಹಾಗೂ ಕುವೆಂಪು ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಪೂರೈಸಿದರು. ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷರಾಗಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಹಾಗೂ ಲಯನ್ಸ್ ಕ್ಲಬ್ನ ಹಿರಿಯ ನಾಯಕರಾಗಿ ಸಮಾಜವನ್ನು ಮುನ್ನಡೆಸುತ್ತಿದ್ದಾರೆ.

ಧರ್ಮಪತ್ನಿ ಶ್ರೀಮತಿ ಪ್ರವೀಣಾ, ಪುತ್ರಿ ಪ್ರಕೃತಿ ಹಾಗೂ ಪುತ್ರ ಪ್ರತೀಕ್ ಅವರನ್ನೊಳಗೊಂಡ ಸುಖಿ ಕುಟುಂಬ ಇವರದ್ದಾಗಿದೆ.
ಪ್ರಸ್ತುತ ಬೆಳ್ತಂಗಡಿ ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಪ್ರಕಾಶ್ ಶೆಟ್ಟಿ ನೊಚ್ಚ ಅವರು ವಾಗ್ಮಿ, ಸಾಮಾಜಿಕ-ಧಾರ್ಮಿಕ-ಶೈಕ್ಷಣಿಕ ಕ್ಷೇತ್ರದ ಮುಂದಾಳು ಹಾಗೂ ಕೃಷಿಕರಾಗಿ ತಮ್ಮದೇ ಆದ ಗುರುತನ್ನು ಮೂಡಿಸಿದ್ದಾರೆ.





