ಬೆಳ್ತಂಗಡಿ : ಬೆಳ್ತಂಗಡಿಯ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರು ಯೂಟ್ಯೂಬರ್ಗಳ ವಿರುದ್ಧ ಅರಣ್ಯ ಇಲಾಖೆ ಎಫ್ಐಆರ್ ದಾಖಲಿಸಿಕೊಂಡಿದೆ. ಯಾವುದೇ ಪೂರ್ವಾನುಮತಿ ಇಲ್ಲದೆ ಕಾಡಿನೊಳಗೆ ತೆರಳಿದ್ದ ಯೂಟ್ಯೂಬರ್ಗಳನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೊಪ್ಪಿಸಿದ ಬೆನ್ನಲ್ಲೇ, ಇದೀಗ ನ್ಯಾಯಾಲಯದ ಅನುಮತಿಯೊಂದಿಗೆ ಅರಣ್ಯ ಇಲಾಖೆ ಕಾನೂನು ಕ್ರಮಕ್ಕೆ ಮುಂದಾಗಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಬಂಗ್ಲೆಗುಡ್ಡೆ ಮೀಸಲು ಅರಣ್ಯದೊಳಗೆ ಯಾವುದೇ ಇಲಾಖೆಯ ಪೂರ್ವಾನುಮತಿ ಪಡೆಯದೆ ಅಕ್ರಮವಾಗಿ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಾಧ್ಯಮ ವ್ಯಕ್ತಿಗಳ ವಿರುದ್ಧ ಬೆಳ್ತಂಗಡಿ ವಲಯ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿದೆ.

ಯುನಿಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್ ಹಾಗೂ ವೆಬ್ಸೈಟ್ನ ಶ್ರೇಯಸ್ ಎಂಬವರೇ ಅರಣ್ಯ ಇಲಾಖೆಯ ಕೆಂಗಣ್ಣಿಗೆ ಗುರಿಯಾದವರು. ಸೆಪ್ಟೆಂಬರ್ 20 ರಂದು ಇವರಿಬ್ಬರು ನಿಯಮ ಮೀರಿ ಮೀಸಲು ಅರಣ್ಯದೊಳಗೆ ತೆರಳಿದ್ದರು. ಈ ವೇಳೆ ಗಮನಿಸಿದ ಧರ್ಮಸ್ಥಳದ ಸ್ಥಳೀಯ ಗ್ರಾಮಸ್ಥರು ಇಬ್ಬರನ್ನೂ ತಡೆದು ಹಿಡಿದು, ಧರ್ಮಸ್ಥಳ ಪೊಲೀಸರಿಗೆ ಒಪ್ಪಿಸಿದ್ದರು.
ವಿಷಯ ತಿಳಿದ ಧರ್ಮಸ್ಥಳ ಪೊಲೀಸರು ಆರೋಪಿಗಳನ್ನು ಬೆಳ್ತಂಗಡಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದರು. ಈ ಸಂಬಂಧ ಧರ್ಮಸ್ಥಳ ನಿವಾಸಿ ನಿತಿನ್ ಎಂಬುವರು ಅರಣ್ಯ ಇಲಾಖೆಗೆ ಅಧಿಕೃತ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಅರಣ್ಯಾಧಿಕಾರಿಗಳು, ಸೆಪ್ಟೆಂಬರ್ 21 ರಂದು ಪ್ರಕರಣ ದಾಖಲಿಸಲು ಬೆಳ್ತಂಗಡಿ ನ್ಯಾಯಾಲಯದ ಅನುಮತಿ ಕೋರಿದ್ದರು.

ನ್ಯಾಯಾಲಯ ಸೆ.22 ರಂದು ಅನುಮತಿ ನೀಡಿದ ಬಳಿಕ ಸಂಜೆ ಕರ್ನಾಟಕ ಅರಣ್ಯ ಕಾಯ್ದೆ ಕಲಂ 24C(ii) ಅಡಿಯಲ್ಲಿ ಶ್ರೇಯಸ್ ಮತ್ತು ಅಭಿಷೇಕ್ ವಿರುದ್ಧ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಸೆ.22 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





