ಬೆಳ್ತಂಗಡಿ: ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳನ್ನು ಸಂಪರ್ಕಿಸುವ ಪ್ರಮುಖ ಕೊಂಡಿ, ಚಾರ್ಮಾಡಿ ಘಾಟಿಯಲ್ಲಿ ಇಂದು ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಾಟಿಯ ಮೂರನೇ ತಿರುವಿನಲ್ಲಿ ಭಾರಿ ಗಾತ್ರದ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದ್ದು, ಪ್ರಯಾಣಿಕರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ಘಾಟಿ ತಿರುವಿನ ಎತ್ತರದ ಪ್ರದೇಶದಲ್ಲಿ ನಿಂತಿದ್ದ ಕಾಡಾನೆ ರಸ್ತೆ ಕಡೆ ಇಳಿಯಲು ಜಾಗ ಹುಡುಕುತ್ತಿದ್ದು, ಕೆಳಗಿಳಿಯಲು ಹೆದರಿ ಕೆಲಕಾಲ ಅಲ್ಲೇ ನಿಂತಿತ್ತು. ಮೇಲ್ಬಾಗದಿಂದ ಬೀಳುವ ಭೀತಿಯಿಂದ ಸುರಕ್ಷಿತ ದಾರಿ ಹುಡುಕುತ್ತಿದ್ದ ಸಲಗವನ್ನು ಕಂಡು ವಾಹನ ಸವಾರರು ಭಯಗೊಂಡು ತಮ್ಮ ವಾಹನಗಳನ್ನು ನಿಲ್ಲಿಸಿದರು.
ಘಟನಾ ಸ್ಥಳದಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಅರಣ್ಯ ಇಲಾಖೆ ಅಥವಾ ಸಂಬಂಧಪಟ್ಟವರಿಗೆ ಮಾಹಿತಿ ನೀಡಲು ಪ್ರವಾಸಿಗರು ಪರದಾಡಿದರು. ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಸಂಚರಿಸುವವರು ಎಚ್ಚರಿಕೆಯಿಂದ ವಾಹನ ಚಲಾಯಿಸಬೇಕು. ವಿಶೇಷವಾಗಿ ರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಹೆಚ್ಚು ಜಾಗ್ರತೆ ವಹಿಸುವಂತೆ ಅರಣ್ಯ ಇಲಾಖೆ ಸೂಚಿಸಿದೆ.




