ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ.) ಶಾಲೆಯಲ್ಲಿ ಅ.3 ರಿಂದ ಅ.7 ರವರೆಗೆ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ‘STEP UP 2026 – Step Towards Responsible Citizenship’ ಕಾರ್ಯಕ್ರಮವು ಅ.7 ರಂದು ಸಮಾರೋಪಗೊಂಡಿತು.

ವಿದ್ಯಾರ್ಥಿಗಳಲ್ಲಿ ಜವಾಬ್ದಾರಿಯುತ ನಾಗರಿಕತ್ವದ ಗುಣಗಳನ್ನು ಬೆಳೆಸುವುದು, ಆತ್ಮವಿಶ್ವಾಸ, ನಾಯಕತ್ವ, ಸಾಮಾಜಿಕ ಕಾಳಜಿ ಹಾಗೂ ಜೀವನ ಕೌಶಲ್ಯಗಳನ್ನು ವೃದ್ಧಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶಾಲಾ ಆವರಣದಲ್ಲಿ ವಿವಿಧ ಚಟುವಟಿಕೆಗಳು, ವಿವಿಧ ತರಬೇತಿ ಹಾಗೂ ಮಾರ್ಗದರ್ಶನ ಕಾರ್ಯಕ್ರಮಗಳು ನಡೆದವು.

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಶ್ವನಾಥ ಪಿ. ಅವರು ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯೊಂದಿಗೆ ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುವುದು ಅಗತ್ಯ. ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ನಾಯಕತ್ವ ಗುಣ, ಆತ್ಮವಿಶ್ವಾಸ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
‘STEP UP 2026’ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ತಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್ಳಲು ಹಾಗೂ ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಅಗತ್ಯವಾದ ಕೌಶಲ್ಯ ಮತ್ತು ಪ್ರೇರಣೆಯನ್ನು ನೀಡುವಲ್ಲಿ ಯಶಸ್ವಿಯಾಯಿತು.

ಶಾಲೆಯ ಪ್ರಾಂಶುಪಾಲರಾದ ಶ್ರೀ ಮನಮೋಹನ್ ನಾಯ್ಕ್ ಕೆ.ಜಿ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶೈಕ್ಷಣಿಕ ಸಂಯೋಜಕ ಶಿಕ್ಷಕಿ ಶ್ರೀಮತಿ ಸುಮಾ ಶ್ರೀನಾಥ್ ಅವರು ಶಿಬಿರದ ಸಂಯೋಜಕರಾಗಿದ್ದರು. ವಿದ್ಯಾರ್ಥಿಗಳಾದ ಅಭಿರಾಮ್ ಕಾರ್ಯಕ್ರಮ ನಿರೂಪಿಸಿದರು. ತಶ್ವಿ ಸ್ವಾಗತಿಸಿ, ಶ್ರದ್ಧಾ ವಂದಿಸಿದರು.





