ಭಟ್ಕಳ: ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಆಸರೆಯಾಗಲು ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ದುಡಿಯುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ ಯುವತಿಯೊಬ್ಬಳು ರಸ್ತೆ ಅಪಘಾತದಲ್ಲಿ ದುರ್ಮರಣ ಹೊಂದಿದ ಹೃದಯವಿದ್ರಾವಕ ಘಟನೆ ಸಿಲಿಕಾನ್ ಸಿಟಿಯಲ್ಲಿ ಸಂಭವಿಸಿದೆ.

ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ನಿವಾಸಿಯಾದ ದೀಪಾಲಿ ಗುರು ಗೊಂಡ ಮೃತಪಟ್ಟ ದುರ್ದೈವಿ ಯುವತಿ.

ಮದುವೆ ಮುಗಿಸಿ ಬರುವಾಗ ಕರಗಿದ ಜೀವ:
ದೀಪಾಲಿ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗೆ ತಮ್ಮ ಸಹೋದ್ಯೋಗಿಗಳೊಂದಿಗೆ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡು ವಾಪಸ್ಸಾಗುತ್ತಿದ್ದರು. ಈ ವೇಳೆ ನಗರದ ಕೆ.ಆರ್. ಪುರಂ ಸಮೀಪ ಅವರು ಸಂಚರಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ.

ಸ್ನೇಹಿತೆಯನ್ನು ರಕ್ಷಿಸುವ ಆತುರ, ತನಗಾದ ಪೆಟ್ಟು ತಿಳಿಯಲೇ ಇಲ್ಲ!:
ಅಪಘಾತ ಸಂಭವಿಸಿದ ತಕ್ಷಣ ಮತ್ತೋರ್ವ ಯುವತಿ ತೀವ್ರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಇದನ್ನು ನೋಡಿ ಗಾಬರಿಗೊಂಡ ದೀಪಾಲಿ, ತನಗಾದ ಗಾಯಗಳನ್ನು ಲೆಕ್ಕಿಸದೆ ಆಕೆಯನ್ನು ರಕ್ಷಿಸುವ ಗಡಿಬಿಡಿಯಲ್ಲಿದ್ದರು. ಮೇಲ್ನೋಟಕ್ಕೆ ದೀಪಾಲಿ ಅವರಿಗೆ ಸಣ್ಣಪುಟ್ಟ ಗಾಯಗಳಾದಂತೆ ಕಂಡಿದ್ದರಿಂದ, ಅವರೇ ಸ್ವತಃ ಅಲ್ಲಿದ್ದ ಸಾರ್ವಜನಿಕರಿಗೆ ತಮ್ಮ ತಂದೆಯ ಮೊಬೈಲ್ ಸಂಖ್ಯೆ ಹಾಗೂ ಮನೆಯ ವಿಳಾಸವನ್ನು ನೀಡಿದ್ದರು.

ಆದರೆ ವಿಧಿಯ ಆಟವೇ ಬೇರೆಯಾಗಿತ್ತು. ತಲೆ ಹಾಗೂ ದೇಹದ ಒಳಭಾಗಕ್ಕೆ ತೀವ್ರ ಸ್ವರೂಪದ ಆಂತರಿಕ ರಕ್ತಸ್ರಾವ ಉಂಟಾಗಿದ್ದರಿಂದ, ಮಾಹಿತಿ ನೀಡಿದ ಕೆಲವೇ ಕ್ಷಣಗಳಲ್ಲಿ ದೀಪಾಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಚಿಕಿತ್ಸೆ ಸಿಗುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದಾರೆ.
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹವನ್ನು ವಾರಸುದಾರರಿಗೆ ಹಸ್ತಾಂತರಿಸಲಾಗಿದ್ದು, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಕೆ.ಆರ್. ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





