ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ ಬೆಳಿಗ್ಗೆಯಷ್ಟೇ ಭೀಕರ ದುರಂತವೊಂದು ಸಂಭವಿಸಿದೆ. ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ವಿಟ್ಲದ ಕೋಟಿಕೆರೆ ಎಂಬಲ್ಲಿ ನಡೆದಿದೆ.


ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಕಸಬಾದ ಗಾಳಿಹಿತ್ಲು ನಿವಾಸಿ, ವೀರಪ್ಪ ಗೌಡ ಎಂಬವರ ಪುತ್ರ 32 ವರ್ಷದ ಲಿತಿನ್ ದುರಂತದಲ್ಲಿ ಪ್ರಾಣ ಕಳೆದುಕೊಂಡ ದುರ್ದೈವಿ. ಲಿತಿನ್ ಅವರು ಎಸ್ಸಿಡಿಸಿಸಿ (SCDCC) ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದರು.

ಬೆಳಗಿನ ಜಾವ ಕೋಟಿಕೆರೆಗೆ ಈಜಲು ತೆರಳಿದ್ದ ಲಿತಿನ್, ಇದ್ದಕ್ಕಿದ್ದಂತೆ ನೀರಿನ ಆಳಕ್ಕೆ ಸಿಲುಕಿ ಮುಳುಗಿದ್ದಾರೆ. ಇದನ್ನು ಗಮನಿಸಿದ ತಕ್ಷಣ ಸ್ಥಳೀಯರು ಕಾರ್ಯಾಚರಣೆ ನಡೆಸಿ ಅವರನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ.
ಆದರೆ, ದುರದೃಷ್ಟವಶಾತ್ ಅಷ್ಟರಲ್ಲಾಗಲೇ ಲಿತಿನ್ ಉಸಿರುಚೆಲ್ಲಿದ್ದರು.







