ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28 ರಿಂದ ಅಕ್ಟೋಬರ್ ೦4ರ ವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಮಹೋತ್ಸವ ಸಭಾಭವನದಲ್ಲಿ ಮಂಗಳವಾರ ನಡೆಯಿತು.

ಭಜನಾ ಕಮ್ಮಟದ ಕಾರ್ಯದರ್ಶಿಗಳಾದ ಶ್ರೀ ಎ. ವೀರು ಶೆಟ್ಟಿಯವರು ಮಾತನಾಡುತ್ತಾ, ತಾಲೂಕು ಹಾಗೂ ವಲಯ ಭಜನಾ ಪರಿಷತ್ ವೇದಿಕೆಯ ಮುಖಾಂತರ ಬೇಸಿಗೆ ರಜೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ, ಕಾನೂನು ಮಾಹಿತಿ ಶಿಬಿರ, ಆರೋಗ್ಯ ಶಿಬಿರ, ಭಜನೋತ್ಸವ, ಮನೆ-ಮನೆ ಭಜನೆ, ಸತ್ಸಂಗ ಕಾರ್ಯಕ್ರಮ, ಶ್ರಮದಾನ, ಸ್ವಚ್ಛತಾ ಕಾರ್ಯಕ್ರಮ, ರಾಷ್ಟ್ರೀಯ ದಿನಾಚರಣೆ, ಹಬ್ಬಹರಿದಿನಗಳ ಆಚರಣೆಯಲ್ಲಿ ಭಜನಾ ಪರಿಷತ್ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿದ್ದು ಸಮಾಜದಲ್ಲಿ ಬಹಳ ದೊಡ್ಡಮಟ್ಟದ ಧಾರ್ಮಿಕ ಹಾಗೂ ಸಂಸ್ಕಾರಯುತ ಕ್ರಾಂತಿಯನ್ನು ಉಂಟುಮಾಡಿದೆ ಎಂದರು.

ಈ ವರ್ಷದ ಭಜನಾ ಕಮ್ಮಟದ ಪೂರ್ವತಯಾರಿಗಳು ರಾಜ್ಯದಾದ್ಯಂತ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ವಿಗೆ ಸರ್ವರ ಸಹಕಾರ ಕೋರಿದರು.
ಕಮ್ಮಟದ ಸಂಚಾಲಕರಾದ ಶ್ರೀ ಜಿ. ಸುಬ್ರಹ್ಮಣ್ಯ ಪ್ರಸಾದ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಭಜನಾ ಪರಿಷತ್ ಮುಖಾಂತರ ರಾಜ್ಯದಾದ್ಯಂತ ನಡೆದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು, ಭಜನಾ ತರಬೇತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಈಗಾಗಲೇ ರಾಜ್ಯ ಭಜನಾ ಪರಿಷತ್ನ ಪದಾಧಿಕಾರಿಗಳ ಸಭೆಯನ್ನು ನಡೆಸಲಾಗಿದೆ ಎಂದರು.
28ನೇ ವರ್ಷದ ಭಜನಾ ಕಮ್ಮಟದ ಶಿಬಿರಾರ್ಥಿಗಳ ನೋಂದಾವಣೆ ಪ್ರಕ್ರಿಯೆ ಈಗಾಗಲೇ ಪ್ರಾರಂಭಗೊಂಡಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕುಮಟ್ಟದಲ್ಲಿ ಭಜನಾ ಪರಿಷತ್ ಸಭೆಗಳು ನಡೆಯುತ್ತಿವೆ. ಸೆಪ್ಟೆಂಬರ್ 27ರಂದು ಮಧ್ಯಾಹ್ನ 2-30 ರಿಂದ ನೋಂದಾವಣೆ ಪ್ರಾರಂಭಗೊಳ್ಳಲಿದ್ದು ಇದಕ್ಕೆ ಪೂರಕ ಸಮಿತಿ ರಚನೆ ಮಾಡಲಾಗಿದೆ. ವಸತಿ ವ್ಯವಸ್ಥೆ, ಉದ್ಘಾಟನಾ ಸಮಾರಂಭ, ನಗರ ಭಜನೆಯ ಜವಾಬ್ದಾರಿ ಹಂಚಿಕೆ, ಸಾಧಕ ಭಜನಾ ಮಂಡಳಿಯ ಆಯ್ಕೆ, ಸಂಪನ್ಮೂಲ ವ್ಯಕ್ತಿಗಳ ಬಗ್ಗೆ, ಸಾಂಸ್ಕೃತಿಕ ಕಾರ್ಯಕ್ರಮ, ಅಕ್ಟೋಬರ್ 4 ರಂದು ನಡೆಯುವ ಭಜನೋತ್ಸವ ಹಾಗೂ ಸಮಾರೋಪ ಸಮಾರಂಭದ ಕುರಿತಾಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಭೆಯ ಅಧ್ಯಕ್ಷತೆಯನ್ನು ಭಜನಾ ಪರಿಷತ್ ರಾಜ್ಯಾಧ್ಯಕ್ಷರಾದ ಶ್ರೀ ಪಿ. ಚಂದ್ರಶೇಖರ ಸಾಲ್ಯಾನ್ ವಹಿಸಿದರು. ವೇದಿಕೆಯಲ್ಲಿ ಶ್ರೀ ಸೀತಾರಾಮ ತೋಳ್ಪಾಡಿತ್ತಾಯ, ಶ್ರೀ ಬಿ. ಭುಜಬಲಿ, ಶ್ರೀ ಲಕ್ಷ್ಮಿನಾರಾಯಣ ರಾವ್, ಶ್ರೀ ಪಾರ್ಶ್ವನಾಥ್ ಜೈನ್, ಶ್ರೀ ಮಹಾವೀರ ಅಜ್ರಿ, ಶ್ರೀ ಕೇಶವ ಪಿ., ಡಾ. ಶಶಿಕಾಂತ್ ಜೈನ್, ಶ್ರೀ ರತ್ನವರ್ಮ ಜೈನ್, ಶ್ರೀ ನಿವಾಸ ರಾವ್ ಉಪಸ್ಥಿತರಿದ್ದರು.

ಭಜನಾ ಕಮ್ಮಟದ ವಿವಿಧ ಉಪಸಮಿತಿಗಳ ಪ್ರಮುಖರು, ಊರ ಮಹನೀಯರು, ಕನ್ಯಾಕುಮಾರಿ ಯುವತಿ ಮಂಡಲದ ಸದಸ್ಯರು ಸಭೆಯಲ್ಲಿ ಭಾಗವಹಿಸಿದರು.
ಶ್ರೀಮತಿ ಪವಿತ್ರ ಸುನಿಲ್ ಸ್ವಾಗತಿಸಿದರು. ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದವಿತ್ತರು.






