ಬೆಳ್ತಂಗಡಿ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 80 ವರ್ಷಗಳಾಗುತ್ತಿದ್ದರೂ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಮಲೆಕುಡಿಯ ಸಮುದಾಯದ ಕಾಲೋನಿಗಳು ಇಂದಿಗೂ ಮೂಲಭೂತ ಸೌಕರ್ಯಗಳಿಲ್ಲದೆ ಕತ್ತಲಲ್ಲಿಯೇ ಇರುವುದು ಕಷ್ಟಕರ ಸಂಗತಿಯಾಗಿದೆ.

ರಸ್ತೆ, ನೀರು ಮತ್ತು ವಿದ್ಯುತ್ಗಾಗಿ ನಾವಿನ್ನೂ ಹೋರಾಟ ನಡೆಸಬೇಕಾದ ಸ್ಥಿತಿಯಿದೆ. 2017ರಿಂದಲೂ ನಾವು ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಭೆಗಳಲ್ಲಿ ಈ ಬಗ್ಗೆ ನಿರಂತರವಾಗಿ ಧ್ವನಿ ಎತ್ತುತ್ತಲೇ ಬಂದಿದ್ದೇವೆ.
2018ರಲ್ಲಿ “ಯಾಕೆ ವಿದ್ಯುತ್ ಸೌಕರ್ಯ ಕಲ್ಪಿಸಿಲ್ಲ?” ಎಂದು ಪ್ರಶ್ನಿಸುವ ಮೊದಲು, ಇಷ್ಟು ವರ್ಷ ಆಡಳಿತ ನಡೆಸಿದವರು ನಮ್ಮ ಸಮುದಾಯವನ್ನು ಹೇಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದನ್ನು ನೋಡಬೇಕಾಗಿದೆ.
ಆದರೆ ಬೆಳ್ತಂಗಡಿಯ ಹಾಲಿ ಶಾಸಕರಾದ ಹರೀಶ್ ಪೂಂಜ ಅವರು ಅಧಿಕಾರಕ್ಕೆ ಬಂದ ನಂತರ ನಮ್ಮ ಕಾಲೋನಿಗಳಿಗೆ ಖುದ್ದಾಗಿ ಭೇಟಿ ನೀಡಿ, ವಿದ್ಯುತ್ ಸೌಕರ್ಯ ಕಲ್ಪಿಸಲು ಸತತ ಪ್ರಯತ್ನ ನಡೆಸಿದ್ದಾರೆ:
26-10-2025: 7 ಕಾಮಗಾರಿಗಳಿಗೆ ಸಂಬಂಧಿಸಿದಂತೆ 6 ಪ್ರಸ್ತಾಪನೆಗಳನ್ನು ಸಲ್ಲಿಸಲಾಯಿತು.
16-04-2026: ರಾಜ್ಯ ವನ್ಯಜೀವಿ ಮಂಡಳಿಯ ಅನುಮತಿ ದೊರೆಯಿತು.
09-07-2026: ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಸಿಕ್ಕಿದೆ.
07-05-2026: ಸಲ್ಲಿಕೆಯಾದ ಕಡತಗಳು ಹಂತ ಹಂತವಾಗಿ ಮುಖ್ಯಾಧಿಕಾರಿಗಳ ಹಂತದಲ್ಲಿ ಪ್ರಕ್ರಿಯೆಯಲ್ಲಿದ್ದವು.
21-05-2026: ಕುತ್ಲೂರು ಮತ್ತು ನಾವೂರಿಗೆ ಸಂಬಂಧಿಸಿದ ಕಡತಗಳನ್ನು ಸಚಿವಾಲಯಕ್ಕೆ ರವಾನಿಸಲಾಗಿದೆ.
ಶಾಸಕರು ಸ್ವತಃ ಬೆಂಗಳೂರಿಗೆ ತೆರಳಿ, ಇಲಾಖೆಯ ಮುಖ್ಯಸ್ಥರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಈ ಯೋಜನೆಗಳಿಗೆ ಅನುಮತಿ ಕೊಡಿಸಲು ನಿರಂತರ ಶ್ರಮ ವಹಿಸಿದ್ದಾರೆ. ವನ್ಯಜೀವಿ ಮಂಡಳಿಯ ಅನುಮತಿ, ಫಾರೆಸ್ಟ್ ಕ್ಲಿಯರೆನ್ಸ್ ಮತ್ತು ಅರಣ್ಯ ಹಕ್ಕು ಕಾಯ್ದೆಯಡಿ ಭೂ ಪರಿವರ್ತನೆ ಪ್ರಕ್ರಿಯೆಗಳು ಪೂರ್ಣಗೊಂಡ ನಂತರವೇ ಜನರಿಗೆ ಅಧಿಕೃತವಾಗಿ ಮಾಹಿತಿ ನೀಡಲು ನಿರ್ಧರಿಸಲಾಗಿತ್ತು.

ರಾಜಕೀಯ ದುರ್ಬಳಕೆ ಮತ್ತು ಆರೋಪಗಳಿಗೆ ತಿರುಗೇಟು:
ಆದರೆ ಕೆಲವರು ವನ್ಯಜೀವಿ ಮಂಡಳಿಯ ಅನುಮತಿಯನ್ನು ತಾವೇ ಕೊಡಿಸಿದ್ದೇವೆ ಎಂದು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಶಾಸಕ ಹರೀಶ್ ಪೂಂಜ ಅವರು ಯಾವುದೇ ಕೆಲಸ ಮಾಡಿಲ್ಲ, ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸುತ್ತಿರುವುದು ಸಂಪೂರ್ಣ ಸುಳ್ಳು ಮತ್ತು ನಿರಾಧಾರ.
ಕುತ್ಲೂರಿನಂತಹ ನಕ್ಸಲ್ ಪೀಡಿತ ಪ್ರದೇಶದ ಅಭಿವೃದ್ಧಿ, ರಸ್ತೆಗಳ ಡಾಂಬರೀಕರಣ ಮತ್ತು ಗಂಗಾ ಕಲ್ಯಾಣ ಯೋಜನೆಯಡಿ ಸುಮಾರು 75 ಬೋರ್ವೆಲ್ಗಳನ್ನು ಒದಗಿಸಿ ಮಲೆಕುಡಿಯ ಸಮುದಾಯಕ್ಕೆ ಹೆಚ್ಚಿನ ಅನುದಾನ ತಂದಿದ್ದು ಇದೇ ಶಾಸಕರು.
ರಾಜಕೀಯ ಲಾಭಕ್ಕಾಗಿ ಮಲೆಕುಡಿಯ ಸಮುದಾಯದ ಹೆಸರನ್ನು ಬಳಸಿಕೊಂಡು, ಜನರ ಕಣ್ಣಿಗೆ ಮಣ್ಣೆರಚುವ ಕೆಲಸವನ್ನು ಯಾರೂ ಮಾಡಬಾರದು. ಸತ್ಯ ಏನೆಂಬುದು ಬೆಳ್ತಂಗಡಿಯ ಜನರಿಗೆ ಮತ್ತು ನಮ್ಮ ಸಮುದಾಯಕ್ಕೆ ಚೆನ್ನಾಗಿ ಗೊತ್ತಿದೆ.

ಸಮುದಾಯದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ನಾಯಕರ ಮೇಲೆ ಇಂತಹ ಸುಳ್ಳು ಆರೋಪಗಳನ್ನು ಹೊರೆಸಿ ಕಪ್ಪುಚುಕ್ಕೆ ಬಳಿಯುವ ಪ್ರಯತ್ನವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಮಲೆಕುಡಿಯ ಸಮುದಾಯದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.







