ಮಂಗಳೂರು : ಅಪಾರ ದುಃಖದ ನಡುವೆಯೂ ಕುತ್ತಾರಿನ ಯುವಕನೊಬ್ಬನ ಪೋಷಕರು ಅತ್ಯಂತ ಮಾನವೀಯ ನಿರ್ಧಾರ ತಳೆದಿದ್ದಾರೆ.

ಸೋಮವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಲೆಗೆ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡಿದ್ದ (ಬ್ರೈನ್ ಡೆಡ್) 21 ವರ್ಷದ ಯುವಕನ ಅಂಗಾಂಗ ದಾನ ಮಾಡಲು ಕುಟುಂಬಸ್ಥರು ಮುಂದಾಗುವ ಮೂಲಕ ಇತರರ ಬಾಳಿಗೆ ಬೆಳಕಾಗಿದ್ದಾರೆ.
ಕುತ್ತಾರು ಬಳಿ ಸೋಮವಾರ ರಾತ್ರಿ ನಡೆದಿದ್ದ ಬೈಕ್ ಮತ್ತು ಸ್ಕೂಟರ್ ನಡುವಿನ ಅಪಘಾತದಲ್ಲಿ ತಲೆಗೆ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಯುವಕನ ಮೆದುಳು ನಿಷ್ಕ್ರಿಯಗೊಂಡಿದ್ದು, ವೈದ್ಯರ ಸಲಹೆಯಂತೆ ಪೋಷಕರು ಯುವಕನ ಅಂಗಾಂಗ ದಾನ ಪ್ರಕ್ರಿಯೆಗೆ ಮುಂದಾಗಿದ್ದಾರೆ.
ಕುತ್ತಾರು ಆಯೆರೆ ಬೆಟ್ಟು ನಿವಾಸಿ ಗೋಪಾಲ ಹಾಗೂ ವೇದಾವತಿ ದಂಪತಿಯ ಕಿರಿಯ ಪುತ್ರ ವರ್ಷಿತ್ ಕುಲಾಲ್ (21) ಅಪಘಾತದಲ್ಲಿ ಗಾಯಗೊಂಡ ಯುವಕ.

ವರ್ಷಿತ್ ಸೋಮವಾರ ರಾತ್ರಿ 7.30 ರ ಹೊತ್ತಿಗೆ ಕುತ್ತಾರಿನಿಂದ ತನ್ನ ಮನೆಯ ಕಡೆ ತೆರಳುತ್ತಿದ್ದಾಗ ಕುತ್ತಾರುವಿನ ಆಟೋ ವರ್ಕ್ ಶಾಪ್ ಮುಂಭಾಗದಲ್ಲಿ ರಾಣಿಪುರದಿಂದ ಕುತ್ತಾರು ಕಡೆಗೆ ಬರುತ್ತಿದ್ದ ಸ್ಕೂಟರ್ ಮತ್ತು ವರ್ಷಿತ್ ನ ಬೈಕ್ ಮುಖಾಮುಖಿ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ಬೈಕಿನಿಂದ ರಸ್ತೆಗೆಸೆಯಲ್ಪಟ್ಟು ತಲೆಗೆ ಗಂಭೀರ ಗಾಯಗೊಂಡಿದ್ದ ವರ್ಷಿತ್ನನ್ನು ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಯೆನೆಪೋಯ ಆಸ್ಪತ್ರೆಯ ವೈದ್ಯರು ವರ್ಷಿತ್ ನ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ಘೋಷಿಸಿದ್ದಾರೆ. ವರ್ಷಿತ್ ಫ್ಯಾಬ್ರಿಕೇಷನ್ ಕೆಲಸ ನಿರ್ವಹಿಸುತ್ತಿದ್ದನೆನ್ನಲಾಗಿದೆ.

ಮೃತ ವರ್ಷಿತ್ ತಂದೆ, ತಾಯಿ ಹಾಗೂ ಏಕೈಕ ಸಹೋದರನನ್ನು ಅಗಲಿದ್ದಾನೆ. ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.





