ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ಅಕ್ರಮವಾಗಿ ಕಾಡುಹಂದಿ ಬೇಟೆಯಾಡಿ ಮಾಂಸವನ್ನು ದಾಸ್ತಾನಿಟ್ಟಿದ್ದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನೆರಿಯ ಗ್ರಾಮದ ಮುಚ್ಚಳ್ಳಿ ನಿವಾಸಿ ಕುಕ್ಕಪ್ಪ ಗೌಡ ಅವರ ಪುತ್ರ, 38 ವರ್ಷದ ಸುರೇಶ್ ಎಂ.ಕೆ. ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 20ರಂದು ಮುಚ್ಚರಾಳಿ ಎಂಬಲ್ಲಿ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಆರೋಪಿ ಕಾಡುಹಂದಿಯನ್ನು ಬೇಟೆಯಾಡಿರುವುದನ್ನು ಪತ್ತೆ ಹಚ್ಚಿದ್ದಾರೆ. ಕಾರ್ಯಾಚರಣೆಯ ವೇಳೆ ಬೇಟೆಗೆ ಬಳಸಿದ್ದ ಕೋವಿ, ಕತ್ತಿ ಹಾಗೂ ಇತರ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಮಹೇಶ್ ಎಂ. ದೇವಡಿಗ ಅವರ ಮಾರ್ಗದರ್ಶನದಲ್ಲಿ ನೆರಿಯ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ರವಿಚಂದ್ರ ಅವರು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪತ್ತೆ ಕಾರ್ಯದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳಾದ ಕಮಲಾ, ದೀಪಾ ವಿ. ಗಡಗಿ,ರಂಜಿತ್ ಕುಮಾರ್ ಎಸ್., ಪಿ.ಜಿ.ನಾಗೇಶ್ ಗೌಡ ಹಾಗೂ ಗಸ್ತು ಅರಣ್ಯ ಪಾಲಕ ವೀರೇಶ್ ಸಹಕರಿಸಿದ್ದಾರೆ.

ಬಂಧಿತ ಆರೋಪಿಯನ್ನು ನ್ಯಾಯಾಧೀಶರ ಸಮಕ್ಷಮ ಹಾಜರುಪಡಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.





