ಉಪ್ಪಿನಂಗಡಿ: ಕೌಟುಂಬಿಕ ಕಲಹದ ಉದ್ವೇಗದಲ್ಲಿದ್ದ ಮಹಿಳೆಯೊಬ್ಬಳು ಇಬ್ಬರು ಪುಟಾಣಿ ಮಕ್ಕಳನ್ನು ಬಾವಿಗೆ ತಳ್ಳಿದ ಪರಿಣಾಮ ಓರ್ವ ಕಂದಮ್ಮ ಮೃತಪಟ್ಟು, ಇನ್ನೊಂದು ಮಗು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಸೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಮೈರಕಟ್ಟೆಯಲ್ಲಿ ನಡೆದಿದೆ.

ಪ್ರಕರಣದ ಆರೋಪಿ ಮಹಿಳೆ ನೂರುನ್ನಿಸಾಳನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪುತ್ತೂರು ನ್ಯಾಯಾಲಯ ಆಕೆಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಮೈರಕಟ್ಟೆ ನಿವಾಸಿ ಸಿನಾನ್ ಹಾಗೂ ಆತನ ಪತ್ನಿ ನೂರುನ್ನಿಸಾ ಮಧ್ಯೆ ಮೊಬೈಲ್ ಫೋನ್ನಲ್ಲಿ ತೀವ್ರ ವೈವಾಹಿಕ ಜಗಳ ನಡೆದಿತ್ತು. ಇದರಿಂದ ತೀವ್ರ ಆಕ್ರೋಶಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಮೂರೂವರೆ ವರ್ಷದ ಹೆಣ್ಣು ಮಗು ಹಾಗೂ ಗಂಡನ ತಂಗಿಯ ಮೂರು ವರ್ಷದ ಗಂಡು ಮಗುವನ್ನು ಮನೆ ಸಮೀಪದ ತೆರೆದ ಬಾವಿಗೆ ಎಸೆದಿದ್ದಳು.
ಮಕ್ಕಳ ಚೀರಾಟ ಕೇಳಿ ತಕ್ಷಣವೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಇಬ್ಬರೂ ಮಕ್ಕಳನ್ನು ಮೇಲಕ್ಕೆತ್ತಿದ್ದರು. ಆದರೆ ಗಂಡನ ತಂಗಿಯ ಮಗು ರಬೀಜ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ ನೂರುನ್ನಿಸಾಳ ಮಗುವನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕೃತ್ಯ ಎಸಗಿ ಮನೆಯಲ್ಲೇ ಇದ್ದ ನೂರುನ್ನಿಸಾಳನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದು, ಬಿಎನ್ಎಸ್ ಕಾಯ್ದೆಯಡಿ ಕೊಲೆ ಹಾಗೂ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸೆಪ್ಟೆಂಬರ್ 20 ರಂದು ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆಕೆಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.





