ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ-75ರ ನೆಲ್ಯಾಡಿಯ ಬೆಥನಿ ಕಾಲೇಜು ಬಳಿ ಸೆಪ್ಟೆಂಬರ್ 20ರ ಮುಂಜಾನೆ ಮೂರು ಬೃಹತ್ ವಾಹನಗಳ ನಡುವೆ ಸರಣಿ ಅಪಘಾತ ಸಂಭವಿಸಿದೆ.

ಚಾಲಕನ ನಿಯಂತ್ರಣ ತಪ್ಪಿ ಮದ್ಯದ ಲೋಡ್ ತುಂಬಿದ್ದ ಲಾರಿಯೊಂದು ರಸ್ತೆಬದಿಯ ಗ್ಯಾಸ್ ಟ್ಯಾಂಕರ್ಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ.
ಅಪಘಾತ ನಡೆದಿದ್ದು ಹೇಗೆ?
ಸಕಲೇಶಪುರ ಕಡೆಯಿಂದ ಮಂಗಳೂರಿನತ್ತ ಶಮೀರ್ ಎಂಬವರು ಚಲಾಯಿಸಿಕೊಂಡು ಬರುತ್ತಿದ್ದ ಲಾರಿಯು ಮುಂಭಾಗದಲ್ಲಿದ್ದ ಬೆಂಗಳೂರಿನ ನೆಲಮಂಗಲ ನಿವಾಸಿ ರಾಜ ಎಂ. ಅವರಿಗೆ ಸೇರಿದ ಮದ್ಯದ ಲಾರಿಗೆ ಹಿಂಬದಿಯಿಂದ ಭಾರಿ ರಭಸದಲ್ಲಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಗೆ ಮದ್ಯದ ಲಾರಿ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್ಗೆ ಸವರಿಕೊಂಡು ಹೋಗಿ ಪಲ್ಟಿಯಾಗಿದೆ.

ಮದ್ಯದ ಬಾಕ್ಸ್ಗಳು ಚೆಲ್ಲಾಪಿಲ್ಲಿ:
ಅಪಘಾತದ ರಭಸಕ್ಕೆ ಮದ್ಯದ ಲೋಡ್ ಸಂಪೂರ್ಣ ಹಾನಿಗೊಳಗಾಗಿದ್ದು, ಬಾಕ್ಸ್ಗಳು ಹಾಗೂ ಮದ್ಯದ ಬಾಟಲಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಘಟನೆಯಲ್ಲಿ ಮೂರೂ ವಾಹನಗಳು ಜಖಂಗೊಂಡಿದ್ದು, ಲಾರಿ ಚಾಲಕರು ಅದೃಷ್ಟವಶಾತ್ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿದ ಕೂಡಲೇ ನೆಲ್ಯಾಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಮಾಲಕ ರಾಜ ಎಂ. ಅವರು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.





