ಕಡಬ: ಕರ್ನಾಟಕ ಗೇರು ಅಭಿವೃದ್ಧಿ ನಿಗಮದ (ಕೆಸಿಡಿಸಿ) ಮಂಗಳೂರು ವಿಭಾಗದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಜರುಕ್ಕುವಿನ ಸಚಿನ್ (33) ಎಂಬುವರು ಸೆಪ್ಟೆಂಬರ್ 22ರ ಮಧ್ಯಾಹ್ನ ನಿವಾಸದಲ್ಲಿ ದಿಢೀರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೈಕ್ ಸರ್ವಿಸ್ನಿಂದ ಅರಣ್ಯ ಇಲಾಖೆ ಸೇವೆಗೆ:
ಮೃತ ಸಚಿನ್ ಕಾಜರುಕ್ಕು ದಿ। ವಿಶ್ವನಾಥ ಪೂಜಾರಿಯವರ ಪುತ್ರ. ಆರಂಭದಲ್ಲಿ ಕಾಜರುಕ್ಕುವಿನಲ್ಲಿ ಬೈಕ್ ಸರ್ವಿಸ್ ಸ್ಟೇಷನ್ ನಡೆಸುತ್ತಿದ್ದ ಇವರು, ಕಳೆದ ಒಂದೂವರೇ ವರ್ಷಗಳಿಂದ ಮಂಗಳೂರು ವಿಭಾಗದ ಕೆಸಿಡಿಸಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದರು.
ಸೆ.22ರಂದು ಮಧ್ಯಾಹ್ನ 1.30ರ ವೇಳೆಗೆ ಮನೆಗೆ ಬಂದು ಊಟಮಾಡಿ ಮಲಗಿದ್ದ ಸಚಿನ್ರನ್ನು ಅವರ ತಾಯಿ ಮಧ್ಯಾಹ್ನ 3 ಗಂಟೆ ವೇಳೆಗೆ ಎಬ್ಬಿಸಲು ಹೋದಾಗ ಸಚಿನ್ ಜೋರಾಗಿ ಉಸಿರಾಟ ನಡೆಸುತ್ತಿರುವುದನ್ನು ಕಂಡು ಇನ್ನೊರ್ವ ಪುತ್ರ ಚರಣ್ ಗೆ ಕರೆ ಮಾಡಿ ಮಾಹಿತಿ ನೀಡಿದ್ದರು.

ಚರಣ್ ಅವರು ಮನೆಗೆ ಬಂದಾಗ ಸಚಿನ್ ಉಸಿರಾಟ ನಡೆಸಲು ಕಷ್ಟಪಡುತ್ತಿರುವುದನ್ನು ಗಮನಿಸಿ ಪರಿಚಯದ ಪ್ರಶಾಂತ್ ಅವರ ಕಾರಿನಲ್ಲಿ ಚಿಕಿತ್ಸೆಗೆ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದಿದ್ದು ಅಲ್ಲಿ ಮಧ್ಯಾಹ್ನ 3.10ರ ವೇಳೆಗೆ ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸಚಿನ್ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿ ವರದಿಯಾಗಿದೆ.
ಬಳಿಕ ಮೃತದೇಹವನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಚಿನ್ ಹೃದಯಘಾತದಿಂದ ಅಥವಾ ಯಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಈತನ ಮರಣದಲ್ಲಿ ಬೇರೆ ಸಂಶಯ ಇರುವುದಿಲ್ಲ ಎಂದು ಮೃತನ ಅಣ್ಣ ಚರಣ್ ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೃತ ಸಚಿನ್ ತಾಯಿ, ಓರ್ವ ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.





