ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಒಂದು ವಾರಗಳ ಕಾಲ ನಡೆಯುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಸಿದ್ಧತೆಗಳ ಬಗ್ಗೆ ಇತ್ತೀಚಿನ ದಿನಗಳಲ್ಲಿ ವಿವಿಧ ಸಮಿತಿಗಳ ಪ್ರತ್ಯೇಕ ಸಭೆಗಳು ನಡೆಯುತ್ತಿದ್ದು ಕಮ್ಮಟದ ಹಿಂದಿನ ದಿವಸ ದಿನಾಂಕ 27/09/26ರ ಭಾನುವಾರ ಆಗಮಿಸುವ ಶಿಬಿರಾರ್ಥಿಗಳನ್ನು ನೋಂದಾವಣೆ ಮಾಡಿಕೊಳ್ಳುವ ನೋಂದಾವಣಾ ಸಮಿತಿಯ ಪೂರ್ವ ಸಿದ್ಧತಾ ಸಭೆಯು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಿತು.

ಈ ಸಭೆಯಲ್ಲಿ ಭಜನಾ ಕಮ್ಮಟದ ಸಂಚಾಲಕರಾದ ಶ್ರೀಯುತ ಸುಬ್ರಮಣ್ಯ ಪ್ರಸಾದ್ ಕಾರ್ಯದರ್ಶಿ ಶ್ರೀ ಎ ವೀರು ಶೆಟ್ಟಿಯವರು ತರಬೇತಿಗೆ ಆಗಮಿಸುವಂತಹ ಭಜಕಾ ಶಿಬಿರಾರ್ಥಿಗಳಿಗೆ ನೋಂದಾವಣಾ ವಿಚಾರದಲ್ಲಿ ಆಗಲಿ ಅಥವಾ ಬೇರೆ ಯಾವುದೇ ವಿಚಾರದಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯ ಬಗ್ಗೆ ಮಾಹಿತಿಯನ್ನು ನೀಡಿದರು.

ದಿನಾಂಕ 27/09/26ರ ಬೆಳಗ್ಗಿನಿಂದಲೇ ಶಿಬಿರಾರ್ಥಿಗಳು ಬರುವ ಕಾರಣ ಮಧ್ಯಾಹ್ನ 2 ಗಂಟೆಯಿಂದ ಪ್ರಾರಂಭಗೊಳ್ಳುವ ನೋಂದಾವಣೆಯ ಸಮಯವನ್ನು ಬದಲಾಯಿಸಿ ಬೆಳಿಗ್ಗೆ ಗಂಟೆ 9:30 ರಿಂದಲೇ ಮಹೋತ್ಸವ ಸಭಾಂಗಣದಲ್ಲಿ ನೋಂದಾವಣಾ ಕಾರ್ಯವನ್ನು ಪ್ರಾರಂಭಿಸುವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಶ್ರೀ ಪಿ ಚಂದ್ರಶೇಖರ ಸಾಲ್ಯಾನ್, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಶ್ರೀಯುತ ಶ್ರೀನಿವಾಸ ರಾವ್, ಭಜನಾ ಕಮ್ಮಟ ಸಮಿತಿಯ ಪದಾಧಿಕಾರಿಗಳು ಮತ್ತು ವಿವಿಧ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದು ಕಮ್ಮಟದ ಯಶಸ್ಸಿನ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡರು.
ಪ್ರಾರಂಭದಲ್ಲಿ ಶಿಕ್ಷಕರಾದ ನಿಶಾಂತ್ ರವರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.





