ಶಿಶಿಲ : ಪತ್ನಿಯ ಅನುಮಾನಾಸ್ಪದ ಸಾವಿನ ಬೆನ್ನಲ್ಲೇ ಇದೀಗ ಪತಿಯೂ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಸೆಪ್ಟೆಂಬರ್ 23ರಂದು ಬೆಳಕಿಗೆ ಬಂದಿದೆ.

ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಕಳೆದೆರಡು ಮೂರು ದಿನಗಳಿಂದ ತನಿಯಪ್ಪ ಗೌಡರು ಎಲ್ಲೂ ಕಾಣಿಸದೆ ನಾಪತ್ತೆಯಾಗಿದ್ದರು.
ಇದರಿಂದ ಅನುಮಾನಗೊಂಡ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರಾದ ರಾಧಾಕೃಷ್ಣ ಗುತ್ತು, ಕುಶಾಲಪ್ಪ ಗೌಡ ಬದ್ರಿಜಾಲು, ಸುಬ್ರಾಯ ಗೌಡ ಹಾಗೂ ಶೀನಪ್ಪ ನಾಯ್ಕ ಮುಚ್ಚಿರಡ್ಕ ಅವರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ತನಿಯಪ್ಪ ಗೌಡರು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಇನ್ನು ಕೆಲವು ದಿನಗಳ ಹಿಂದೆಯಷ್ಟೇ ತನಿಯಪ್ಪ ಗೌಡರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿತ್ತು. ಪತ್ನಿಯ ಸಾವು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. ಈ ಬಗ್ಗೆ ಚಿನ್ನಮ್ಮ ಅವರ ಸಹೋದರ ಗಂಗಾಧರ ಗೌಡ ನೀಡಿದ ದೂರಿನನ್ವಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿತ್ತು.

ಪತ್ನಿಯ ಸಾವಿನ ರಹಸ್ಯ ಇನ್ನೂ ಹೊರಬೀಳುವ ಮುನ್ನವೇ ಇದೀಗ ಪತಿ ತನಿಯಪ್ಪ ಗೌಡರು ಕೂಡ ಆತ್ಮಹತ್ಯೆಗೆ ಶರಣಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಮೃತರು ಮಕ್ಕಳಾದ ಸತ್ಯಶ್ರೀ ಹಾಗೂ ಆದಿತ್ಯ ಅವರನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಮಗ್ರ ತನಿಖೆಯ ನಂತರವಷ್ಟೇ ಈ ದಂಪತಿಯ ಸಾವಿಗೆ ನಿಜವಾದ ಕಾರಣ ಏನೆಂಬುದು ಬೆಳಕಿಗೆ ಬರಬೇಕಿದೆ.





