ಬೆಂಗಳೂರು: ಯುವವಾಹಿನಿ (ರಿ.) ಬೆಂಗಳೂರು ಘಟಕದ ವತಿಯಿಂದ ಆಯೋಜಿಸಲಾದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮವು ದಿನಾಂಕ 20/9/2026, ಭಾನುವಾರದಂದು ಶ್ರೀ ಆದಿಚುಂಚನಗಿರಿ ಸಮುದಾಯ ಭವನ, ಹೊಸಹಳ್ಳಿ, ವಿಜಯನಗರ, ಬೆಂಗಳೂರಿನಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಭಕ್ತಿಭಾವದಿಂದ ನೆರವೇರಿತು.

ಕಾರ್ಯಕ್ರಮವು ಬೆಳಿಗ್ಗೆ 9 ಗಂಟೆಗೆ ಕುಳಿತ ಭಜನೆಯೊಂದಿಗೆ ಶುಭಾರಂಭಗೊಂಡಿತು. ನಂತರ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಂಕಲ್ಪದೊಂದಿಗೆ ಪುತ್ತೂರಿನಿಂದ ಆಗಮಿಸಿದ ಶ್ರೀ ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ಆರಂಭವಾಯಿತು.
ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ ಮತ್ತು ಉದ್ಘಾಟಕರಾದ ಶ್ರೀ ಗೋವಿಂದ ಬಾಬು ಪೂಜಾರಿ ಅವರನ್ನು ಪೂರ್ಣಕುಂಭ ಕಲಶ ಹಾಗೂ ಕುಣಿತ ಭಜನೆಯ ಮೆರವಣಿಗೆಯೊಂದಿಗೆ ಭವ್ಯವಾಗಿ ಸ್ವಾಗತಿಸಲಾಯಿತು. ಅವರ ಉಪಸ್ಥಿತಿಯೊಂದಿಗೆ ನಮ್ಮ ಘಟಕದ ಕುಣಿತ ಭಜನಾ ತಂಡದ ಸದಸ್ಯರಿಂದ ಸುಮಾರು 20 ನಿಮಿಷಗಳ ಕುಣಿತ ಭಜನೆ ಪ್ರದರ್ಶನ ಭಕ್ತಿ ಪೂರ್ವಕವಾಗಿ ನಡೆಯಿತು. ಬಳಿಕ ಮಹಾಪೂಜೆ ನಡೆಸಲಾಯಿತು.
ಕು. ವರ್ಷಿತಾ ಅವರಿಂದ ಪ್ರಾರ್ಥನೆಯ ಮೂಲಕ, ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ವಿಜೇತ್ ವಿ ಪೂಜಾರಿ ಅವರು ವಹಿಸಿದ್ದರು. ಸಭೆಯಲ್ಲಿ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿ, ಉದ್ಘಾಟಕರಾದ ಶ್ರೀ ಗೋವಿಂದ ಬಾಬು ಪೂಜಾರಿ, ಮುಖ್ಯ ಅತಿಥಿಗಳಾದ ಪ್ರಸನ್ನ ಪೂಜಾರಿ, ಚಲನಚಿತ್ರ ನಿರ್ದೇಶಕ ಸ್ಮಿತೇಶ್ ಬಾರ್ಯಾ, ಯುವ ವಾಗ್ಮಿ ಚಂದ್ರಹಾಸ ಬಳಂಜ, ಯುವವಾಹಿನಿ (ರಿ.) ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಯವರಾದ ಪ್ರಸಾದ್ ಕುಮಾರ್ ಕಲ್ಲಾಜೆ, ಘಟಕದ ಕಾರ್ಯದರ್ಶಿ ಮನೋಜ್ ಕುಮಾರ್ ಟಿ., ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾದ ದೇವಿ ಪ್ರಸಾದ್ ಹಾಗೂ ಶ್ರೀಮತಿ ದೀಕ್ಷಾ ಕೋಟ್ಯಾನ್ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷರು ಎಲ್ಲರನ್ನೂ ಶಾಲು ಹಾಕಿ, ಹೂ ನೀಡಿ ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು. ಕು.ನಿರೀಕ್ಷಾ ಎಲ್ಲರನ್ನೂ ಸ್ವಾಗತಿಸಿದರು. ಶ್ರೀಮತಿ ದೀಕ್ಷಾ ಕೋಟ್ಯಾನ್ ಪ್ರಸ್ತಾವಿಕ ನುಡಿ ನುಡಿದರು. ಉದ್ಘಾಟಕರಾದ ಗೋವಿಂದ ಬಾಬು ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದ ಕುರಿತು ಮಾತನಾಡಿದ ಶ್ರೀಯುತರು ತಮಗೆ ನೀಡಿದ ಸ್ವಾಗತವು, ಭಕ್ತಿಯನ್ನು ತುಂಬುವ ಸಂಕೇತ ಎಂದು ಬಣ್ಣಿಸಿದರು. ಯುವವಾಹಿನಿ (ರಿ.) ಬೆಂಗಳೂರು ಘಟಕದ ಸರ್ವ ಕಾರ್ಯಕ್ರಮಕ್ಕೆ ತಾವು ಬೆಂಬಲವಾಗಿ ಇರುವುದಾಗಿ ಭರವಸೆ ನೀಡಿದರು.
ನಾರಾಯಣಗುರುಗಳನ್ನು ಕೊಂಡಾಡಿದ ಶ್ರೀ ಶ್ರೀ ಸೌಮ್ಯನಾಥ ಸ್ವಾಮೀಜಿಯವರು, ಗುರುಗಳ ತತ್ವಾದರ್ಶಗಳ ಕುರಿತು ಬೆಳಕು ಚೆಲ್ಲಿದರು. ಗುರುಸಂದೇಶದ ಕುರಿತು ಸುದೀರ್ಘ ಧಾರ್ಮಿಕ ಉಪನ್ಯಾಸ ನೀಡಿದ ಶ್ರೀ ಸ್ಮಿತೇಶ್ ಬಾರ್ಯಾ, ಆಧುನಿಕ ಸಮಾಜದಲ್ಲಿ ಗುರುಗಳ ಸಂದೇಶದ ಪ್ರಸ್ತುತತೆ ಕುರಿತು ಮಾತನಾಡಿದರು. ಶ್ರೀ ಪ್ರಸನ್ನ ಪೂಜಾರಿ ಹಾಗೂ ಚಂದ್ರಹಾಸ ಬಳಂಜ ಅವರು ತಮ್ಮ ಮಾತಿನೊಂದಿಗೆ ಗುರುಗಳನ್ನು ಸ್ಮರಿಸಿದರು. ಶ್ರೀ ಹರೀಶ್ ಶಾಂತಿ ಪುತ್ತೂರು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯ್ತು. ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಎಲ್ಲಾ ಪ್ರೋತ್ಸಾಹಕರನ್ನು ಗೌರವಿಸಲಾಯಿತು. ಘಟಕದ ಅಧ್ಯಕ್ಷರಾದ ವಿಜೇತ್ ವಿ. ಪೂಜಾರಿಯವರು ಅಧ್ಯಕ್ಷೀಯ ಭಾಷಣ ಮಾಡಿದರು. ಶ್ರೀಮತಿ ಮಧುಶ್ರೀ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ದೇವಿ ಪ್ರಸಾದ್ ಅವರ ಧನ್ಯವಾದ ಸಮರ್ಪಣೆಯೊಂದಿಗೆ ವೇದಿಕೆ ಕಾರ್ಯಕ್ರಮಕ್ಕೆ ತೆರೆ ಎಳೆಯಲಾಯ್ತು.

ಗುರುಪೂಜೆಯ ಭಾಗವಾಗಿ ಮಧ್ಯಾಹ್ನ ಮಹಾ ಮಂಗಳಾರತಿ ನಡೆಯಿತು. ವೈಯಕ್ತಿಕ ಗುರುಪ್ರಾರ್ಥನೆಯೊಂದಿಗೆ, ಬ್ರಹ್ಮಾರ್ಪಣೆ ಸಹಿತ ಪ್ರಸಾದ ವಿತರಣೆ ಮಾಡಲಾಯಿತು. ಬಳಿಕ ಮಧ್ಯಾಹ್ನದ ಅನ್ನಸಂತರ್ಪಣೆ ನಡೆಯಿತು.
ಮಧ್ಯಾಹ್ನದ ವಿರಾಮದ ಬಳಿಕ ಗುರುಗಳ ಜೀವನ-ಸಂದೇಶ ಕುರಿತು ಘಟಕದ ಸದಸ್ಯರು ವೇದಿಕೆ ಮೇಲೆ ಪ್ರಸ್ತುತಪಡಿಸಿದ ಅರ್ಥಪೂರ್ಣ ಪ್ರಹಸನಗಳು ನೆರೆದಿದ್ದ ಸಭಾಸದರ ಮನಮುಟ್ಟಿತು. ಘಟಕದ ಸದಸ್ಯರಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲೆ, ಪ್ರಬಂಧ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳು ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆಯೊಂದಿಗೆ ಯಶಸ್ವಿಯಾಯ್ತು. ಗುರುಗಳ ಸಂದೇಶ ಹಾಗೂ ಜೀವನಾದರ್ಶವನ್ನು ನೆರೆದಿರುವವರಿಗೆ ಪಸರಿಸಿತು. ಘಟಕದ ಕುಣಿತ ಭಜನಾ ತಂಡದ ವಿಶೇಷ ನಾಮಫಲಕವನ್ನು ಅತಿಥಿಗಳು ಬಿಡುಗಡೆ ಮಾಡಿದರು.

ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯ್ತು. ದಿನಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಅನ್ನದಾನ ಹಾಗೂ ಸಾಯಂಕಾಲ ಚಹಾ ಹಾಗೂ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ದಿನದ ಕೊನೆಯಲ್ಲಿ ರಾಷ್ಟ್ರಗೀತೆಯೊಂದಿಗೆ ಗುರುಜಯಂತಿ ಕಾರ್ಯಕ್ರಮವು ಸಂಪನ್ನಗೊಂಡಿತು.





