
ಬೆಳ್ತಂಗಡಿ: ಅಡಿಕೆ ಮರದಿಂದ ಅಡಿಕೆ ಕೊಯ್ಯುತ್ತಿದ್ದಾಗ ಆಕಸ್ಮಿಕವಾಗಿ ವಿದ್ಯುತ್ ತಂತಿಗೆ ದೋಟಿ ಸ್ಪರ್ಶಿಸಿ, ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿದ್ದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಅಜಿಕುರಿ ನಿವಾಸಿ ನಝೀರ್ (38) ಮೃತಪಟ್ಟ ವ್ಯಕ್ತಿ.


ಅಕ್ಟೋಬರ್ 4ರ ಭಾನುವಾರ ಸೂಕ್ತ ಜಾಗರೂಕತೆಯೊಂದಿಗೆ ಮನೆಯ ಸಮೀಪದ ಅಡಿಕೆ ಮರದಿಂದ ದೋಟಿ ಮೂಲಕ ಅಡಿಕೆ ಕೊಯ್ಯುತ್ತಿದ್ದರು. ಈ ವೇಳೆ ಮರದ ಸಮೀಪದಲ್ಲೇ ಹಾದುಹೋಗಿದ್ದ ವಿದ್ಯುತ್ ತಂತಿಗೆ ಆಕಸ್ಮಿಕವಾಗಿ ದೋಟಿ ತಾಗಿದ್ದು, ನಝೀರ್ ಅವರಿಗೆ ಬಲವಾದ ವಿದ್ಯುತ್ ಶಾಕ್ ಹೊಡೆದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅಕ್ಟೋಬರ್ 8ರ ಗುರುವಾರ ಬೆಳಗ್ಗಿನ ಜಾವ ಚಿಕಿತ್ಸೆ ಫಲಿಸದೆ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ದುರಂತ ಘಟನೆಗೆ ಸಂಬಂಧಿಸಿದಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.




