ಧರ್ಮಸ್ಥಳ: ಪಂಜಾಬ್ ನಲ್ಲಿ ಅಸಹಜವಾಗಿ ಮೃತಪಟ್ಟ ಧರ್ಮಸ್ಥಳದ ಆಕಾಂಕ್ಷಾ ಎಸ್.ನಾಯರ್ ಅವರ ದುರ್ಘಟನೆಗೆ ನ.17 ರಂದು ಒಂದೂವರೆ ವರ್ಷ ಪೂರ್ತಿಯಾಗಿದೆ. ಅದಾಗ್ಯೂ ಕೂಡ ಪಂಜಾಬ್ನ ಫಗ್ವಾರಾ ಪೊಲೀಸ್ ಠಾಣೆಯ ಅಧಿಕಾರಿಗಳು ಆಕೆಯಿಂದ ವಶಪಡಿಸಿಕೊಂಡ ಮೊಬೈಲ್ ಫೋನ್, ಆಕೆಯ ಹೆತ್ತವರು ಅಪೇಕ್ಷಿಸಿದ ಇತರ ಯಾವುದೇ ಮಾಹಿತಿಗಳನ್ನೂ ಮಾಹಿತಿಹಕ್ಕು ಕಾಯ್ದೆಯಡಿ ನೀಡದೆ ಸತಾಯಿಸುತ್ತಿದ್ದಾರೆ.
ಈಬಗ್ಗೆ ನ.16 ರಂದು ಧರ್ಮಸ್ಥಳಕ್ಕೆ ಭೇಟಿ ನೀಡಿದ ಕೇಂದ್ರ ಉಕ್ಕು ಮತ್ತು ಕೈಗಾರಿಕಾ ಸಚಿವ, ಮಾಜಿ ಮುಖ್ಯಮಂತ್ರಿ, ರಾಜ್ಯದ ಜೆಡಿಎಸ್ ವರಿಷ್ಠ ನಾಯಕ ಹೆಚ್ ಡಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಆಕಾಂಕ್ಷಾ ಹೆತ್ತವರು ಮನವಿ ಸಲ್ಲಿಸಿದ್ದಾರೆ.


ಮಗಳು ಏರೋಸ್ಪೇಸ್ ಇಂಜಿನಿಯರಿಂಗ್ ಕಲಿತ ಪಂಜಾಬ್ ನ ಲವ್ಲಿ ಪ್ರೊಫೆಶನಲ್ ಕಾಲೇಜಿನಿಂದ ತನ್ನ ಉನ್ನತ ವ್ಯಾಸಂಗ ಮತ್ತು ಉದ್ಯೋಗ ನಿಮಿತ್ತ ಜರ್ಮನಿ ಪ್ರವಾಸಕ್ಕೆ ಬೇಕಾಗಿ ಎನ್.ಒ.ಸಿ ಪಡೆಯಲು ತೆರಳಿದ್ದಾಗ ಅಲ್ಲಿ ಪುತ್ರಿಯ ಅಸಹಜ ಸಾವು ಸಂಭವಿಸಿತ್ತು. ಆಕಾಂಕ್ಷಾ ಕಾಲೇಜಿನ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಆದರೆ ಈ ಬಗ್ಗೆ ಕಾಲೇಜಿನ ಸಿ.ಸಿ ಟಿವ ಪುಟೇಜ್, ಘಟನೆ ನಡೆದ ದಿನದ ಆಕೆಯ ಚಲನವಲನ, ಆಕೆಯ ಫೋನ್ ನಲ್ಲಿ ಯಾರನ್ನೆಲ್ಲಾ ಸಂಪರ್ಕಿಸಿದ್ದಾಳೆ ಎಂದು ನೋಡಬೇಕಾದರೆ ಆಕೆಯ ಮೊಬೈಲ್ ಫೋನ್ ವಾಪಾಸು ನೀಡುವಂತೆ ಹೆತ್ತವರು ಕೇಳಿಕೊಂಡಿದ್ದರು.
ನಮ್ಮ ಪುತ್ರಿ ಯಾವತ್ತೂ ಆತ್ಮಹತ್ಯೆ ಮಾಡಿಕೊಳ್ಳುವವಳಲ್ಲ. ಅವಳನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ. ಇಲ್ಲದಿದ್ದರೆ ನಾವು ಅಲ್ಲಿನ ಫಗ್ವಾರ ಠಾಣೆಗೆ ತೆರಳಿದ್ದಾಗ ಕಾಲೇಜಿನ ಪ್ರೊಫೆಸರ್ ಬಿಲ್ಜಿ ಮ್ಯಾಥ್ಯೂ ಎಂಬಾತನ ಪತ್ನಿ ನಮ್ಮ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದು ಯಾಕೆ? ಕಾಲೇಜು ಕಡೆಯಿಂದ ಬಹು ಲಕ್ಷ ಮೊತ್ತದ ಆಮಿಷ ಒಡ್ಡಿದ್ದು ಯಾಕೆ ಎಂಬುದನ್ನು ಹೆತ್ತವರು ಪ್ರಶ್ನಿಸಿದ್ದಾರೆ.
ಕುಮಾರಸ್ವಾಮಿಯವರನ್ನು ಭೇಟಿ ಮಾಡಿದ ಹೆತ್ತವರು ಮಗಳ ಸಾವಿನ ನ್ಯಾಯದ ವಿಚಾರವಾಗಿ ಕೂಲಂಕಷವಾಗಿ ಮಾತನಾಡಿದ್ದಾರೆ. ಮಗಳ ಸಾವಿನ ದಿನದ ಸಿಸಿ ಟಿ.ವಿ ದಾಖಲೆಗಳು, ಸ್ಥಳಮಹಜರು ವರದಿ, ಅಂದು ರಚಿಸಲಾಗಿದ್ದ
5 ಜನರ ವಿಶೇಷ ತನಿಖಾ ತಂಡದವರು ನಡೆಸಿದ ತನಿಖೆಯ ವರದಿ, ಇತ್ಯಾಧಿಯನ್ನು 6 ಬಾರಿ ಮಾಹಿತಿ ಹಕ್ಕಿನಡಿ ಕೇಳಿದರೂ, ಅಲ್ಲಿನ ಪೊಲೀಸರು ಅಪೇಕ್ಷಿಸಿದಂತೆ ಪೆನ್ ಡ್ರೈವ್ ಕಳಿಸಿಕೊಟ್ಟರೂ ಪೊಲೀಸರು ಉದ್ದಟತನದಿಂದ ವರ್ತಿಸುತ್ತಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳಿಂದಾಗಿ
ಇದರಲ್ಲಿ ಏನೋ ಸಂಶಯವಿದೆ. ಆದ್ದರಿಂದ ಎಲ್ಲಾ ವಿವರಗಳನ್ನು ನಮಗೆ ಲಭಿಸುವಂತೆ ಪಂಜಾಬ್ ನ ಗೃಹ ಇಲಾಖೆ ಮತ್ತು ಅಲ್ಲಿನ ಆಡಳಿತ ಸರಕಾರದ ಮೂಲಕ ನಮ್ಮ ಬೇಡಿಕೆಯನ್ನು ಪೂರೈಸಿಕೊಡಬೇಕು ಎಂದು ಹೆತ್ತಬರು ಮಾಜಿ ಸಿಎಂ ಅವರನ್ನು ಒತ್ತಾಯಿಸಿದರು.
ಜೆಡಿಎಸ್ ಮಹಿಳಾ ಘಟಕದ ಮಾಜಿ ಜಿಲ್ಲೆ ಮತ್ತು ತಾಲೂಕು ಅಧ್ಯಕ್ಷೆಯೂ ಆಗಿದ್ದ ಆಕಾಂಕ್ಷ ಹೆತ್ತವರಾದ ಸಿಂಧೂ ದೇವಿ ಮತ್ತು ಸುರೇಂದ್ರನ್ ಅವರನ್ನು ಸಂತೈಸಿದ ಹೆಚ್ಡಿಕೆ ಯವರು ಈ ಬಗ್ಗೆ ದೆಹಲಿಗೆ ಹೋದ ಬಳಿಕ ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಈ ವೇಳೆ ವಿಧಾನ ಪರಿಷತ್ ಶಾಸಕ ಎಸ್.ಎಲ್ ಭೋಜೇ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಜಾಕೆ ಮಾಧವ ಗೌಡ, ಹಿರಿಯ ಪತ್ರಕರ್ತ ಅಶ್ರಫ್ ಆಲಿಕುಂಞಿ ಮುಂಡಾಜೆ ಉಪಸ್ಥಿತರಿದ್ದರು.





