ಬೆಳ್ತಂಗಡಿ: ಮನೆಯೊಳಗೆ ಆರಾಮವಾಗಿ ಕುಳಿತು ಊಟ ಮಾಡುವ ಜಾಗದಲ್ಲೇ ದೈತ್ಯ ಕಾಳಿಂಗ ಸರ್ಪ ಪ್ರತ್ಯಕ್ಷವಾದರೆ ಹೇಗಿರಬೇಡ? ಇಂತಹದ್ದೇ ಒಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನಾವೂರಿನಲ್ಲಿ ನಡೆದಿದೆ.

ಜುಲೈ 19 ರಂದು ಮಧ್ಯಾಹ್ನ ನಾವೂರು ನಿವಾಸಿ ವಿಲ್ಪ್ರೇಡ್ ಡಿಸೋಜಾ ಎಂಬವರ ಮನೆಯ ಡೈನಿಂಗ್ ಹಾಲ್ನಲ್ಲಿ ಇದ್ದಕ್ಕಿದ್ದಂತೆ ಸುಮಾರು 8 ಅಡಿ ಉದ್ದದ ದೈತ್ಯ ಕಾಳಿಂಗ ಸರ್ಪ ಕಾಣಿಸಿಕೊಂಡಿದೆ. ಮನೆಯೊಳಗೆ ಪ್ರತ್ಯಕ್ಷವಾದ ಭೀಕರ ಸರ್ಪವನ್ನು ಕಂಡು ಕುಟುಂಬಸ್ಥರು ಕ್ಷಣಕಾಲ ಆತಂಕಗೊಂಡಿದ್ದಾರೆ.


ತಕ್ಷಣವೇ ಸಮಯಪ್ರಜ್ಞೆ ಮೆರೆದ ಮನೆಯವರು, ಲಾಯಿಲದ ಪ್ರಸಿದ್ಧ ಉರಗ ರಕ್ಷಕರಾದ ಸ್ನೇಕ್ ಅಶೋಕ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಸ್ನೇಕ್ ಅಶೋಕ್ ಅವರು, ಅತ್ಯಂತ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ, ಸುಮಾರು 8 ಅಡಿ ಉದ್ದವಿದ್ದ ಆ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದಿದ್ದಾರೆ. ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಮುಕ್ತಗೊಳಿಸಲಾಗಿದೆ.

ಪ್ರಸ್ತುತ ಮಳೆಗಾಲದ ಸಮಯವಾಗಿರುವುದರಿಂದ, ತಂಪಾದ ವಾತಾವರಣದಿಂದ ತಪ್ಪಿಸಿಕೊಳ್ಳಲು ಹಾವುಗಳು ಬೆಚ್ಚಗಿನ ಜಾಗವನ್ನು ಅರಸಿ ಮನೆಗಳ ಒಳಗಡೆ ಸೇರಿಕೊಳ್ಳುವ ಸಾಧ್ಯತೆ ಹೆಚ್ಚು. ಹೀಗಾಗಿ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ರತಿಯೊಬ್ಬರೂ ಎಚ್ಚರಿಕೆಯಿಂದಿರಲು ಮನವಿ ಮಾಡಲಾಗಿದೆ.







