ಗುರುವಾಯನಕೆರೆ: ಪುತ್ತೂರಿನಿಂದ ಧರ್ಮಸ್ಥಳದ ಕಡೆಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ ನಿಯಂತ್ರಣ ತಪ್ಪಿ ಮನೆಯೊಂದರ ಅಂಗಳಕ್ಕೆ ನುಗ್ಗಿದ ಭೀಕರ ಘಟನೆ ಗುರುವಾಯನಕೆರೆಯ ಕುಲಾಲ ಮಂದಿರದ ಬಳಿ ನಡೆದಿದೆ.

ಮತ್ತೊಂದು ವಾಹನವನ್ನು ಓವರ್ಟೇಕ್ ಮಾಡಲು ಹೋದ ಬಸ್ ಚಾಲಕನ ನಿಯಂತ್ರಣ ತಪ್ಪಿ, ರಸ್ತೆ ಬದಿಯಲ್ಲಿದ್ದ ಅಬ್ದುಲ್ ರಹ್ಮಾನ್ ಎಂಬವರ ಮನೆಯ ಅಂಗಳಕ್ಕೆ ನೇರವಾಗಿ ನುಗ್ಗಿದೆ.


ಬಸ್ನಲ್ಲಿ ವಿವಿಧ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಸೇರಿದಂತೆ ಪ್ರಯಾಣಿಕರು ತುಂಬಿದ್ದರು. ಬಸ್ ಏಕಾಏಕಿ ರಸ್ತೆ ಬಿಟ್ಟು ನುಗ್ಗುತ್ತಿದ್ದಂತೆ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ದೊಡ್ಡ ಅನಾಹುತವೊಂದು ತಪ್ಪಿದೆ. ಘಟನೆಯಿಂದ ಮನೆಯ ಅಂಗಳ ಹಾಗೂ ಬಸ್ಗೆ ಆಗಿರುವ ಹಾನಿಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.






