ಉಳ್ಳಾಲ: ಪವಿತ್ರ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕುಂಪಲ ನಿವಾಸಿ ವ್ಯಕ್ತಿಯೋರ್ವರು ಉತ್ತರಾಖಂಡದ ಯಮುನೋತ್ರಿಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ.


ಉಳ್ಳಾಲ ತಾಲೂಕಿನ ಕುಂಪಲದ ವಿದ್ಯಾನಗರ ನಿವಾಸಿ ರಾಜೇಶ್ ಗಾಣಿಗ(53) ಮೃತಪಟ್ಟವರು.
ರಾಜೇಶ್ ಸೆ.18ರಂದು ಉಳ್ಳಾಲದ ಹದಿನಾಲ್ಕು ಮಂದಿ ಸಹ ಯಾತ್ರಿಕರೊಂದಿಗೆ ಮಂಗಳೂರಿನಿಂದ ರೈಲಿನ ಮೂಲಕ ಚಾರ್ ಧಾಮ್ ಯಾತ್ರೆ ಹೊರಟಿದ್ದರು.
ಉತ್ತರ ಭಾರತದ ಪವಿತ್ರ ಕ್ಷೇತ್ರಗಳಿಗೆ ಭೇಟಿಯಾಗಿ ಸೋಮವಾರ ತಂಡವು ಉತ್ತರಾಖಂಡಕ್ಕೆ ತಲುಪಿ ಪ್ರವಾಸಿ ಕೇಂದ್ರದ ಕೊಠಡಿಯೊಂದರಲ್ಲಿ ತಂಗಿ ವಿಶ್ರಾಂತಿ ಪಡೆದಿತ್ತು.

ಮಂಗಳವಾರ ಬೆಳಗ್ಗೆ ಉತ್ತರಾಖಂಡದ ಗಿರಿ ಶಿಖರಗಳಲ್ಲಿ ಏಳು ಕಿಲೋ ಮೀಟರ್ ಪಾದಯಾತ್ರೆಯಲ್ಲಿ ಕ್ರಮಿಸಿದ ರಾಜೇಶ್ ಕ್ಷೇತ್ರದ ಆವರಣದ ಕುರ್ಚಿಯೊಂದರಲ್ಲಿ ಕುಳಿತಿದ್ದಾಗ ಹಠಾತ್ತಾಗಿ ಕುಸಿದು ಬಿದ್ದರೆನ್ನಲಾಗಿದೆ. ಅವರನ್ನ ಕೂಡಲೇ ಜೊತೆಗಿದ್ದವರು ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಿಸಿದರೂ ದಾರಿಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಮೃತ ರಾಜೇಶ್ ಅವರ ಮೃತದೇಹವನ್ನು ಉತ್ತರಾಖಂಡದ ಡೆಹ್ರಡೂನಿನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ರಾಜೇಶ್ ವೆಲ್ಡರ್ ಆಗಿದ್ದು, ಜಪ್ಪಿನಮೊಗರುವಿನಲ್ಲಿ ಸ್ವಂತ ವರ್ಕ್ ಶಾಪ್ ಹೊಂದಿದ್ದರು.
ಮೃತರು ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.





