ಬೆಳ್ತಂಗಡಿ: ಸರ್ಕಾರಿ ಶಾಲೆಗಳ ಉಳಿವು, ಅಭಿವೃದ್ಧಿ ಹಾಗೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ (ರಿ.) ಇದರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ಘಟಕವನ್ನು ಪುನಾರಚಿಸಲಾಗಿದ್ದು, ಹರೀಶ್ ಮಚ್ಚಿನ ಅವರನ್ನು ಅಧ್ಯಕ್ಷರಾಗಿ ಹಾಗೂ ಜಮೀರ್ ಸಅದಿ ಅವರನ್ನು ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗುರುವಾಯನಕೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ SDMC ಸದಸ್ಯರಿಗೆ RTE ಕಾಯ್ದೆ–2009, SDMCಯ ಕರ್ತವ್ಯಗಳು, ಜವಾಬ್ದಾರಿಗಳು ಮತ್ತು ಅಧಿಕಾರಗಳ ಕುರಿತು ಅರ್ಧ ದಿನದ ಮಾಹಿತಿ ಕಾರ್ಯಾಗಾರ ನಡೆಸಲಾಯಿತು. ಇದರೊಂದಿಗೆ ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಗಳ ಪ್ರಸ್ತುತ ಸ್ಥಿತಿಗತಿ, SDMCಗಳು ಎದುರಿಸುತ್ತಿರುವ ಸಮಸ್ಯೆಗಳು, ಶಾಲೆಗಳ ಅಭಿವೃದ್ಧಿ ಹಾಗೂ ಮಕ್ಕಳ ಗುಣಮಟ್ಟದ ಶಿಕ್ಷಣಕ್ಕಾಗಿ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ಕುರಿತು ಸಮಗ್ರ ಸಂವಾದ ನಡೆಯಿತು.
ಕಾರ್ಯಾಗಾರದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ, RTE ಕಾಯ್ದೆಯ ಆಶಯವನ್ನು ಶಾಲಾ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ SDMCಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
SDMCಯನ್ನು ಕೇವಲ ಸಭೆ ನಡೆಸುವ ಅಥವಾ ದಾಖಲೆಗಳಿಗೆ ಸೀಮಿತವಾಗಿರುವ ಸಮಿತಿಯನ್ನಾಗಿ ಮಾಡದೆ, ಶಾಲೆಯ ಶೈಕ್ಷಣಿಕ ಗುಣಮಟ್ಟ, ಮಕ್ಕಳ ಹಾಜರಾತಿ, ಶಾಲಾ ಅಭಿವೃದ್ಧಿ, ಮೂಲಭೂತ ಸೌಕರ್ಯ, ಸರ್ಕಾರಿ ಸೌಲಭ್ಯಗಳ ಅನುಷ್ಠಾನ ಹಾಗೂ ಪೋಷಕರ ಭಾಗವಹಿಸುವಿಕೆಯ ಮೇಲ್ವಿಚಾರಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಪ್ರತಿಯೊಂದು ಸರ್ಕಾರಿ ಶಾಲೆಯ SDMC ಸದಸ್ಯರಿಗೆ ತಮ್ಮ ಕಾನೂನುಬದ್ಧ ಕರ್ತವ್ಯ ಮತ್ತು ಅಧಿಕಾರಗಳ ಬಗ್ಗೆ ಸ್ಪಷ್ಟ ಅರಿವು ಮೂಡಿಸುವುದು ವೇದಿಕೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನಾದ್ಯಂತ ನಿರಂತರ ಮಾಹಿತಿ ಕಾರ್ಯಾಗಾರಗಳು ಹಾಗೂ ಸಂಘಟನಾ ಚಟುವಟಿಕೆಗಳನ್ನು ನಡೆಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ ಪ್ರಸ್ತುತ ಆಗುಹೋಗುಗಳ ಕುರಿತು ಶಾಲಾವಾರು ಚರ್ಚೆ ನಡೆಯಿತು. ಶಿಕ್ಷಕರ ಲಭ್ಯತೆ, ಮೂಲಭೂತ ಸೌಕರ್ಯ, ವಿದ್ಯಾರ್ಥಿಗಳ ಹಿತಾಸಕ್ತಿ, ಪೋಷಕರ ಭಾಗವಹಿಸುವಿಕೆ, ಶಾಲಾ ಅಭಿವೃದ್ಧಿ ಮತ್ತು ಸರ್ಕಾರಿ ಯೋಜನೆಗಳ ಅನುಷ್ಠಾನ ಸೇರಿದಂತೆ ವಿವಿಧ ವಿಚಾರಗಳ ಕುರಿತು SDMC ಸದಸ್ಯರು ತಮ್ಮ ಅಭಿಪ್ರಾಯ ಹಾಗೂ ಅನುಭವಗಳನ್ನು ಹಂಚಿಕೊಂಡರು.
ಶಾಲೆಗಳಲ್ಲಿ ಎದುರಾಗುವ ಸಮಸ್ಯೆಗಳನ್ನು ಕೇವಲ ವೈಯಕ್ತಿಕ ಸಮಸ್ಯೆಯಾಗಿ ಪರಿಗಣಿಸದೆ, SDMC ಮತ್ತು ಪೋಷಕರ ಸಹಭಾಗಿತ್ವದೊಂದಿಗೆ ಕಾನೂನುಬದ್ಧ ಹಾಗೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ಪರಿಹರಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆಯ ಸಂಘಟನಾ ಕಾರ್ಯಚಟುವಟಿಕೆಗಳನ್ನು ಬೆಳ್ತಂಗಡಿ ತಾಲೂಕಿನ ಪ್ರತಿಯೊಂದು ಸರ್ಕಾರಿ ಶಾಲೆಯ ಮಟ್ಟಕ್ಕೂ ವಿಸ್ತರಿಸುವುದು, SDMC ಅಧ್ಯಕ್ಷರು ಮತ್ತು ಸದಸ್ಯರನ್ನು ಪರಸ್ಪರ ಸಂಪರ್ಕಿಸುವುದು ಹಾಗೂ ಪೋಷಕರನ್ನು ಸಂಘಟಿಸುವ ಉದ್ದೇಶದಿಂದ ನೂತನ ತಾಲೂಕು ಸಮಿತಿಯನ್ನು ರಚಿಸಲಾಯಿತು.
ನೂತನ ಬೆಳ್ತಂಗಡಿ ತಾಲೂಕು ಸಮಿತಿ
ಅಧ್ಯಕ್ಷರು: ಹರೀಶ್ ಮಚ್ಚಿನ
ಉಪಾಧ್ಯಕ್ಷರು:
ರಾಜೇಶ್ ಕೇಳದಿಪೇಟೆ
ಪುಷ್ಪರಾಜ್ ಕರಂಬಾರು
ಎಂ. ಉಮರಬ್ಬ ಮದ್ದಡ್ಕ.
ಅಬ್ದುಲ್ ಶರೀಫ್ ತಣ್ಣೀರುಪಂತ.
ಪ್ರಧಾನ ಕಾರ್ಯದರ್ಶಿ: ಜಮೀರ್ ಸಅದಿ
ಜೊತೆ ಕಾರ್ಯದರ್ಶಿಗಳು:
ಹನೀಫ್ ಗುರುವಾಯನಕೆರೆ
ಪ್ರಶಾಂತ್ ನೆತ್ತಾರು
ಕೋಶಾಧಿಕಾರಿ: ಸುಧಾಕರ್ ಕುವೆಟ್ಟು
ಸಂಘಟನಾ ಕಾರ್ಯದರ್ಶಿಗಳು:
ಹಮೀದ್ ಕಾಶಿಪಟ್ನ
ಬಾಲಕೃಷ್ಣ ಕಣಿಯೂರು
ಇಲ್ಯಾಸ್ ಕರಾಯ
ಅಬ್ದುಲ್ ರಹಿಮಾನ್ ಗುರುವಾಯನಕೆರೆ
ಪದಾಧಿಕಾರಿಗಳು:
ಆದಂ ಇಳಂತಿಲ
ಸಮದ್ ಕುಂಡಡ್ಕ
ಇಸ್ಮಾಯಿಲ್ ಕರಾಯ
ಉಮೇಶ್ ಕುತ್ತಿನ
ಲಾವಣ್ಯ ಕುವೆಟ್ಟು
ಸಿರಾಜ್ ಪಿಲಿಚಂಡಿಕಲ್ಲು
ಎಲ್ಲರನ್ನು ತಾಲೂಕು ಘಟಕದ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬೆಳ್ತಂಗಡಿ ತಾಲೂಕಿನಲ್ಲಿ ಸಂಘಟನಾ ಚಟುವಟಿಕೆಗಳಿಗೆ ಮಾರ್ಗದರ್ಶನ ಹಾಗೂ ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಾಧಿಸುವ ನಿಟ್ಟಿನಲ್ಲಿ ತಾಲೂಕು ಅಧ್ಯಕ್ಷರಾದ ಹರೀಶ್ ಮಚ್ಚಿನ, ಜಮೀರ್ ಸಅದಿ, ಕೆ.ಎಸ್. ಅಬ್ದುಲ್ಲ ಕರಾಯ, ಯೋಗೀಶ್ ಕುವೆಟ್ಟು ಹಾಗೂ ಹಮೀದ್ ಕಾಶಿಪಟ್ನ ಅವರನ್ನು ಜಿಲ್ಲಾ ನಿರ್ದೇಶಕರಾಗಿ ಆಯ್ಕೆ ಮಾಡಲಾಯಿತು
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ (ರಿ.)ಯ ರಾಜ್ಯಾಧ್ಯಕ್ಷ ಮೊಯ್ದಿನ್ ಕುಟ್ಟಿ, ಕೋಶಾಧಿಕಾರಿ ಉಸ್ಮಾನ್ ನೆಕ್ಕಿಲು, ರಾಜ್ಯ ನಿರ್ದೇಶಕರಾದ ಫಾರೂಕ್ ಟೆಕ್ನಿಕ್, ಮಹಮ್ಮದ್ ಕುಂಞ ಜಿ.ಎಂ., ಸಿರಾಜ್ ಕುವೆಟ್ಟು, ಮಹಮ್ಮದ್ ಸಲೀಲ್ ಹಾಗೂ ಅಬ್ದುಲ್ ಲತೀಫ್ ಗುರುವಾಯನಕೆರೆ ಉಪಸ್ಥಿತರಿದ್ದರು.
ತಾಲೂಕಿನ ವಿವಿಧ ಸರ್ಕಾರಿ ಶಾಲೆಗಳ SDMC ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂವಾದದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಬೆಳ್ತಂಗಡಿ ತಾಲೂಕಿನ ಸರ್ಕಾರಿ ಶಾಲೆಗಳ SDMCಗಳನ್ನು ಮತ್ತಷ್ಟು ಸಕ್ರಿಯಗೊಳಿಸುವುದು, ಸದಸ್ಯರಿಗೆ ನಿರಂತರ ಕಾನೂನು ಮತ್ತು ಶೈಕ್ಷಣಿಕ ಮಾಹಿತಿ ನೀಡುವುದು, ಶಾಲಾ ಸಮಸ್ಯೆಗಳನ್ನು ಗುರುತಿಸಿ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತರುವುದು ಹಾಗೂ ಮಕ್ಕಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸಲು ಪೋಷಕರು ಮತ್ತು ಸಮುದಾಯದ ಸಹಭಾಗಿತ್ವವನ್ನು ಹೆಚ್ಚಿಸುವುದು ನೂತನ ಸಮಿತಿಯ ಪ್ರಮುಖ ಆದ್ಯತೆಗಳಾಗಿವೆ.
“SDMC ಬಲಿಷ್ಠವಾದರೆ ಸರ್ಕಾರಿ ಶಾಲೆ ಬಲಿಷ್ಠವಾಗುತ್ತದೆ; ಸರ್ಕಾರಿ ಶಾಲೆ ಬಲಿಷ್ಠವಾದರೆ ಮಕ್ಕಳ ಭವಿಷ್ಯ ಬಲಿಷ್ಠವಾಗುತ್ತದೆ” ಎಂಬ ಆಶಯದೊಂದಿಗೆ ಬೆಳ್ತಂಗಡಿ ತಾಲೂಕಿನಾದ್ಯಂತ ಸಂಘಟಿತ ಕಾರ್ಯಚಟುವಟಿಕೆಗಳನ್ನು ಮುಂದುವರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.





