ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕದಲ್ಲಿ ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ಮೀನು ಹಿಡಿಯಲು ತೆರಳಿದ್ದ ಬಾವ ಮತ್ತು ಬಾಮೈದ ಇಬ್ಬರೂ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೋರ್ವ ಯುವಕ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.

ಅಕ್ಟೋಬರ್ 12 ರ ಭಾನುವಾರ ರಾತ್ರಿ ಈ ದುರಂತ ಸಂಭವಿಸಿದೆ. ಕಲ್ಮಡ್ಕದ ಬೊಮ್ಮೆಟ್ಟಿ ನಿವಾಸಿಗಳಾದ ಬಾಬು-ಸೀತಾ ದಂಪತಿಯ ಪುತ್ರ 28 ವರ್ಷದ ಭರತ್ ಹಾಗೂ ಬೆಳ್ತಂಗಡಿ ತಾಲೂಕಿನ ಮುಂಗಲು ನಿವಾಸಿ ವೀರಪ್ಪ-ಸೀತಮ್ಮ ದಂಪತಿಯ ಪುತ್ರ 34 ವರ್ಷದ ರಮೇಶ್ ಮೃತಪಟ್ಟ ದುರ್ದೈವಿಗಳು.
ಭರತ್ ಹಾಗೂ ಅವರ ಸಹೋದರಿ ಭವ್ಯಾ ಅವರ ಪತಿಯಾದ ರಮೇಶ್, ತಮ್ಮ ಸಂಬಂಧಿ ಯುವಕ ಸಿಂಚನ್ ಜೊತೆಗೂಡಿ ಭಾನುವಾರ ರಾತ್ರಿ ಮನೆಯಿಂದ ಸುಮಾರು ಒಂದೂವರೆ ಕಿಲೋಮೀಟರ್ ದೂರದಲ್ಲಿರುವ ತೋಡಿಗೆ ಮೀನು ಹಿಡಿಯಲು ತೆರಳಿದ್ದರು.
ರಾತ್ರಿ ಸುಮಾರು 10:30ರ ವೇಳೆಗೆ ತೋಡಿನಲ್ಲಿ ಮೀನು ಹಿಡಿಯುತ್ತಿದ್ದಾಗ, ತೋಡಿನ ಮೇಲ್ಭಾಗದಲ್ಲಿ ಕಟ್ಟಲಾಗಿದ್ದ ವಿದ್ಯುತ್ ಪ್ರವಹಿಸುತ್ತಿದ್ದ ತಂತಿಯನ್ನು ದಾಟಲು ಯತ್ನಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ತಂತಿ ತಾಗಿ ಭರತ್ ಮತ್ತು ರಮೇಶ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಇವರ ಜೊತೆಯಲ್ಲಿದ್ದ ಯುವಕ ಸಿಂಚನ್ ಅವರಿಗೂ ವಿದ್ಯುತ್ ತಂತಿ ತಾಗಿದ್ದು, ತೀವ್ರ ಆಘಾತದಿಂದ ದೂರಕ್ಕೆ ಎಸೆಯಲ್ಪಟ್ಟಿದ್ದಾರೆ. ಘಟನೆಯಲ್ಲಿ ಸಿಂಚನ್ ಅವರ ಕೈ, ಎದೆ ಹಾಗೂ ಕಾಲುಗಳಿಗೆ ಸುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ತಿಳಿಯುತ್ತಿದ್ದಂತೆಯೇ ತಂತಿ ಕಟ್ಟಿದ್ದ ಮನೆಯವರು ತಕ್ಷಣವೇ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಗಾಯಗೊಂಡ ಸಿಂಚನ್ ಅವರನ್ನು ಕೆ.ವಿ.ಜಿ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಬೆಳ್ಳಾರೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಮಹಜರು ಕಾರ್ಯ ಪೂರ್ಣಗೊಳಿಸಿದ್ದಾರೆ. ಇಬ್ಬರು ಯುವಕರ ಹಠಾತ್ ಸಾವಿನಿಂದ ಕಲ್ಮಡ್ಕ ಹಾಗೂ ಬೆಳ್ತಂಗಡಿಯ ಮುಂಗಲು ಭಾಗದಲ್ಲಿ ಶೋಕದ ಛಾಯೆ ಆವರಿಸಿದೆ. ಈ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.





