ಮಂಗಳೂರು: ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಭೀಕರ ಘಟನೆ ಬೆಳಕಿಗೆ ಬಂದಿದೆ. ಅನೈತಿಕ ಸಂಬಂಧದ ಶಂಕೆಯೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದೆ.

ಮಹಾರಾಷ್ಟ್ರ ಮೂಲದ 30 ವರ್ಷದ ಸೋನಾಲಿ ಕೊಲೆಯಾದ ದುರ್ದೈವಿ. ಶಿವಲಿಂಗಪ್ಪ ಕೊಲೆಗೈದ ಆರೋಪಿ ಎಂದು ಗುರುತಿಸಲಾಗಿದೆ.

ಪತ್ನಿಯ ನಡತೆ ಹಾಗೂ ಅನೈತಿಕ ಸಂಬಂಧದ ಮೇಲಿನ ಶಂಕೆಯಿಂದ ಪತಿ ಶಿವಲಿಂಗಪ್ಪ ಈ ಕೃತ್ಯವೆಸಗಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆಡಳಿತ ಮತ್ತು ಸಾರ್ವಜನಿಕ ವಲಯದಲ್ಲಿ ಈ ಘಟನೆ ತೀವ್ರ ಆಘಾತವನ್ನುಂಟು ಮಾಡಿದೆ.

ಘಟನೆ ನಡೆದ ತಕ್ಷಣವೇ ಎಚ್ಚೆತ್ತ ಕಾವೂರು ಠಾಣೆಯ ಪೊಲೀಸರು, ತರಾಸಾಗಿ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಕಾವೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.





