ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದಲ್ಲಿ ವೈದ್ಯಕೀಯ ಕ್ಲಿನಿಕ್ಗೆ ಡಿಸೇಲ್ ಸುಟ್ಟು ಬೆಂಕಿ ಹಚ್ಚಿದ್ದ ಕುರಿತು ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇದರಲ್ಲಿ ಒಬ್ಬ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉಳಿದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ನಾವೂರು ನಿವಾಸಿ ರವಿ ಕುಮಾರ್ (31ವ) ಎಂಬಾತನನ್ನು ಈ ಪ್ರಕರಣದ ಹೆಚ್ಚಿನ ವಿಚಾರಣೆಗೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಸುರೇಶ್ ಪಿ.ಎನ್ (44ವ) ಮತ್ತು ದಿನೇಶ್ ಪ್ರಭು (51ವ) ಎಂಬವರಿಗೆ ನ್ಯಾಯಾಲಯವು ನ್ಯಾಯಾಂಗ ಬಂಧವನ್ನು ವಿಧಿಸಿದ್ದು, ಅವರನ್ನು ಮಂಗಳೂರು ಜೈಲಿಗೆ ಕಳುಹಿಸಲಾಗಿದೆ. ಅ.6ರಂದು ರಾತ್ರಿ ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿರುವ ಡಾ| ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ತಡ ರಾತ್ರಿ ಡಿಸೇಲ್ ಸುರಿದು ಬೆಂಕಿ ಹಚ್ಚಿದ ಘಟನೆ ಬೆಳ್ತಂಗಡಿ ತಾಲೂಕನ್ನು ಬೆಚ್ಚಿಬೀಳಿಸಿತ್ತು. ಯಾರೋ ಕಿಡಿಗೇಡಿಗಳು ಡಿಸೇಲ್ ಸುರಿದು ಈ ಕೃತ್ಯ ನಡೆಸಿದ್ದರು. ಇದರಿಂದಾಗಿ ಡಾ. ಪ್ರದೀಪ್ ಅವರಿಗೆ ಸುಮಾರು 2-3ಲಕ್ಷ ರೂ ನಷ್ಟ ಉಂಟಾಗಿತ್ತು. ಔಷಧಿಗಳು, ವೈದ್ಯಕೀಯ ಸಲಕರಣೆಗಳು ಸಂಪೂರ್ಣ ಸುಟ್ಟು ಹೋಗಿತ್ತು. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್ಎಸ್ ಕಲಂ 326, 324ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣದ ತನಿಖೆಯನ್ನು ಕೈಗೊತ್ತಿಕೊಂಡ ಪೊಲೀಸರು ವಿವಿಧ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿ, ಡಿಸೇಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ನಾವೂರು ನಿವಾಸಿ ರವಿ ಪೂಜಾರಿಯನ್ನು ಪ್ರಥಮವಾಗಿ ಬಂಧಿಸಿ ವಿಚಾರಣೆ ನಡೆಸಿದ್ದರು. ಬಳಿಕ ನಾವೂರು ನಿವಾಸಿ ಸುರೇಶ್ ಪಿ.ಎನ್ ಎಂಬಾತನನ್ನು ಅ.14ರಂದು ಬೆಳಿಗ್ಗೆ ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದರು. ಅದೇ ದಿನ ರಾತ್ರಿ ಪುತ್ತೂರಿನ ಕೌಡಿಚಾರು ಎಂಬಲ್ಲಿದ್ದ ದಿನೇಶ್ ಪ್ರಭು ಎಂಬವರನ್ನು ಪೊಲೀಸರು ಬಂಧಿಸಿದ್ದರು. ಪ್ರಕರಣದ ವಿಚಾರಣೆಯ ಬಳಿಕ ಅ.15ರಂದು ಮೂರು ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಇದರಲ್ಲಿ ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿ ರವಿಕುಮಾರ್ ಎಂಬಾತನನ್ನು ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಂಡಿದ್ದಾರೆ. ಉಳಿದ ಇಬ್ಬರನ್ನು ಮಂಗಳೂರು ಜೈಲಿಗೆ ಹಾಕಲಾಗಿದೆ. ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿರುವ ರವಿಕುಮಾರ್ನಿಂದ ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಯಲಿದೆ.





