ಬೆಳ್ತಂಗಡಿ: ಬೆಳ್ತಂಗಡಿ ತಾಲೂಕನ್ನು ಬೆಚ್ಚಿಬೀಳಿಸಿದ್ದ ನಾವೂರಿನ ಡಾ. ಪ್ರದೀಪ್ ಅವರ ಕ್ಲಿನಿಕ್ಗೆ ಡೀಸೆಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಕೃತ್ಯ ನಡೆದ ಒಂದೇ ವಾರದಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರು, ಪ್ರಮುಖ ಆರೋಪಿಯನ್ನು ಬಂಧಿಸಿದ್ದು, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ!
ಅಕ್ಟೋಬರ್ 7ರಂದು ತಡರಾತ್ರಿ ನಾವೂರು ಪೇಟೆಯಲ್ಲಿರುವ ಸ್ವಾತಿ ಕಟ್ಟಡದ ಡಾ. ಪ್ರದೀಪ್ ಅವರ ಆರೋಗ್ಯ ಕ್ಲಿನಿಕ್ಗೆ ಕಿಡಿಗೇಡಿಗಳು ಡೀಸೆಲ್ ಸುರಿದು ಬೆಂಕಿ ಹಚ್ಚಿದ್ದರು. ಈ ದುಷ್ಕೃತ್ಯದಿಂದಾಗಿ ಕ್ಲಿನಿಕ್ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಔಷಧಿಗಳು ಹಾಗೂ ವೈದ್ಯಕೀಯ ಸಲಕರಣೆಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದವು. ಸುಮಾರು 2 ರಿಂದ 3 ಲಕ್ಷ ರೂಪಾಯಿ ನಷ್ಟ ಸಂಭವಿಸಿತ್ತು.

ಬಿಎನ್ಎಸ್ ಕಲಂ 326 ಹಾಗೂ 324 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಬೆಳ್ತಂಗಡಿ ಪೊಲೀಸರು, ಘಟನಾ ಸ್ಥಳಕ್ಕೆ ಸೋಕೋ (SOCO) ತಂಡ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ಪೊಲೀಸರು ನಾವೂರು ನಿವಾಸಿ ರವಿ ಪೂಜಾರಿ ಎಂಬಾತನನ್ನು ಬಂಧಿಸಿದ್ದಾರೆ. ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ 14ರಂದು ಬೆಳಿಗ್ಗೆ ನಾವೂರು ನಿವಾಸಿ ಸುರೇಶ್ ಇಂಚರ ಹಾಗೂ ರಾತ್ರಿ ಪುತ್ತೂರಿನ ಕೌಡಿಚಾರ್ನಲ್ಲಿದ್ದ ದಿನೇಶ್ ಪ್ರಭು ನಾವೂರು ಎಂಬವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ಶಾಂತಿಯುತ ನಾವೂರಿನಲ್ಲಿ ನಡೆದ ಈ ಕೃತ್ಯ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಶಾಸಕ ಹರೀಶ್ ಪೂಂಜ, ಸ್ಥಳೀಯ ಜನಪ್ರತಿನಿಧಿಗಳು, ವೈದ್ಯರು ಹಾಗೂ ಗ್ರಾಮಸ್ಥರು ಖಂಡನಾ ಸಭೆ ನಡೆಸಿ ಆರೋಪಿಗಳ ತಕ್ಷಣದ ಬಂಧನಕ್ಕೆ ಆಗ್ರಹಿಸಿದ್ದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಬೂಮರೆಡ್ಡಿ, ಬೆಳ್ತಂಗಡಿ ಉಪವಿಭಾಗ ಡಿವೈಎಸ್ಪಿ ರೋಹಿಣಿ, ಬೆಳ್ತಂಗಡಿ ಠಾಣಾ ಪೊಲೀಸರು, ಸೋಕೋ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಡಿವೈಎಸ್ಪಿ ರೋಹಿಣಿ ಸಿ.ಕೆ.ಮಾರ್ಗದರ್ಶನದಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್ ನೇತೃತ್ವದಲ್ಲಿ ಪೊಲೀಸ್ ಉಪ ನೀರಿಕ್ಷಕರಾದ ಆನಂದ್ ಹಾಗೂ ಸಿಖಂದರ್ ಪಾಷಾ ತಂಡ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.
ವೈದ್ಯಕೀಯ ಸೇವೆ ನೀಡುತ್ತಿದ್ದ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳ ಅಸಲಿ ಉದ್ದೇಶವೇನು? ಬಂಧಿತ ಹಾಗೂ ಶಂಕಿತರ ವಿಚಾರಣೆಯಿಂದ ಇನ್ನಷ್ಟು ಸತ್ಯಾಸತ್ಯತೆಗಳು ಹೊರಬರಬೇಕಿದೆ.





