ಉಪ್ಪಿನಂಗಡಿ: ಕಾಲೇಜು ಕ್ಯಾಂಪಸ್ ಒಳಗೆ ನುಗ್ಗಿದ ಅಪರಿಚಿತ ವ್ಯಕ್ತಿಯೋರ್ವ ವಿದ್ಯಾರ್ಥಿನಿಯ ಮೊಬೈಲ್ ಫೋನ್ ಕದ್ದೊಯ್ದ ಘಟನೆ ಉಪ್ಪಿನಂಗಡಿಯ ಸರ್ಕಾರಿ ಕಾಲೇಜಿನಲ್ಲಿ ನಡೆದಿದೆ. ಈ ಕುರಿತು ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದೆ.

ಇಲ್ಲಿನ ಸರಕಾರಿ ಕಾಲೇಜಿನ ಅಂತಿಮ ಪದವಿಯ ವಿದ್ಯಾರ್ಥಿನಿ ಬುಧವಾರದಂದು ಕಾಲೇಜಿಗೆ ಬಂದಾಕೆ ತನ್ನ ಬ್ಯಾಗನ್ನು ಕಾಲೇಜಿನ ಕ್ಲಾಸ್ ರೂಮಿನಲ್ಲಿರಿಸಿ, ಕ್ಲಾಸ್ ರೂಮಿಗೆ ಬಾಗಿಲು ಹಾಕಿ, ಇತರ ವಿದ್ಯಾರ್ಥಿಗಳೊಂದಿಗೆ ಲ್ಯಾಬ್ ಪ್ರಾಕ್ಟಿಕಲ್ ತರಬೇತಿಗೆಂದು ಲ್ಯಾಬ್ ಕೊಠಡಿಗೆ ಹೋಗಿದ್ದರು.
ಈ ವೇಳೆ ತರಗತಿ ಕೊಠಡಿಗೆ ಪ್ರವೇಶಗೈದ ವ್ಯಕ್ತಿಯೋರ್ವ ತರಗತಿ ಕೊಠಡಿಯೊಳಗಿದ್ದ ವಿದ್ಯಾರ್ಥಿನಿಯರ ಬ್ಯಾಗ್ ಶೋಧಿಸಿ ಅದರಲ್ಲಿದ್ದ ಮೊಬೈಲನ್ನು ಎಗರಿಸಿದ್ದಾನೆ.


ಈ ಬಗ್ಗೆ ಕಾಲೇಜಿನ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ವೀಕ್ಷಿಸಿದಾಗ ಹೊರಗಿನ ವ್ಯಕ್ತಿಯೋರ್ವ ಕಾಲೇಜಿನ ಕ್ಲಾಸ್ ರೂಮ್ ಪ್ರವೇಶಿಸಿರುವುದು ಮತ್ತು ಮೊಬೈಲನ್ನು ಎಗರಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸಿದ್ದು, ದೃಶ್ಯಾವಳಿ ಸಹಿತ ಘಟನೆಯ ಬಗ್ಗೆ ಕಾಲೇಜಿನಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಕಳವಾದ ಮೊಬೈಲ್ ವಿದ್ಯಾರ್ಥಿನಿಯ ತಂದೆಯ ಹೆಸರಿನಲ್ಲಿದ್ದ ಕಾರಣಕ್ಕೆ ವಿದ್ಯಾರ್ಥಿನಿಯ ತಂದೆಯ ಹೆಸರಿನಲ್ಲಿ ಮೊಬೈಲ್ ಕಳೆದುಹೋದ ಪ್ರಕರಣವನ್ನು ದಾಖಲಿಸಿದ್ದಾರೆ.



