ಕೇರಳ: ಹೆತ್ತವರೇ ಸ್ವಲ್ಪ ಇತ್ತ ಗಮನ ಹರಿಸಿ… ನಿಮ್ಮ ಪುಟಾಣಿ ಮಕ್ಕಳಿಗೆ ತಿನ್ನಲು ಗಟ್ಟಿಯಾದ ಆಹಾರ ಪದಾರ್ಥಗಳನ್ನು ಕೊಡುವಾಗ ನೀವು ಎಷ್ಟರಮಟ್ಟಿಗೆ ಜಾಗರೂಕರಾಗಿದ್ದೀರಾ? ನೀವು ಮಾಡುವ ಒಂದು ಸಣ್ಣ ನಿರ್ಲಕ್ಷ್ಯ, ಎಷ್ಟು ದೊಡ್ಡ ದುರಂತಕ್ಕೆ ಕಾರಣವಾಗಬಹುದು ಎಂಬುದಕ್ಕೆ ಕೇರಳದಲ್ಲಿ ನಡೆದಿರುವ ಈ ಹೃದಯವಿದ್ರಾವಕ ಘಟನೆಯೇ ಸಾಕ್ಷಿ.


ಕೇರಳದ ಮಲಪ್ಪುರಂ ಜಿಲ್ಲೆಯ ವೆಂಗರಾ ಸಮೀಪದ ಕುನ್ನುಂಪುರಂನಲ್ಲಿ ತೀರಾ ದುರದೃಷ್ಟಕರ ಘಟನೆಯೊಂದು ಸಂಭವಿಸಿದೆ. ಮನೆಯಲ್ಲಿ ಮಿಕ್ಸ್ಚರ್ ತಿನ್ನುತ್ತಿದ್ದ ಕೇವಲ ಮೂರು ವರ್ಷದ ಗಂಡು ಮಗುವೊಂದು ದುರಂತವಾಗಿ ಸಾವನ್ನಪ್ಪಿದೆ.
ಮಿಕ್ಸ್ಚರ್ನಲ್ಲಿದ್ದ ಕಡಲೆಕಾಯಿ ಆಕಸ್ಮಿಕವಾಗಿ ಬಾಲಕನ ಗಂಟಲಿನಲ್ಲಿ ಸಿಲುಕಿಕೊಂಡಿದೆ. ತಕ್ಷಣವೇ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಎದುರಾಗಿದೆ. ಮಗು ಒದ್ದಾಡುವುದನ್ನು ಕಂಡು ಗಾಬರಿಗೊಂಡ ಪೋಷಕರು ತಕ್ಷಣವೇ ಆಸ್ಪತ್ರೆಗೆ ಓಡಿದ್ದಾರೆ. ಆದರೆ, ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದೆ.


ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಮತ್ತು ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಹಸನ್ಮುಖಿಯಾಗಿದ್ದ ಮಗು ಕಣ್ಣೆದುರೇ ಹೆಣವಾಗಿ ಮಲಗಿರುವುದನ್ನು ನೋಡಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.







