ಕಾರ್ಕಳ: ಗಂಡ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಬಿಟ್ಟು ಪ್ರಿಯಕರನೊಂದಿಗೆ ಕಾರ್ಕಳಕ್ಕೆ ಓಡಿಬಂದಿದ್ದ ವಿವಾಹಿತೆಯೊಬ್ಬಳ ಪ್ರಕರಣ ಈಗ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯ ಕಂಡಿದೆ.

ಹೌದು, ಪೊಲೀಸರ ಸಮಯೋಚಿತ ಬುದ್ಧಿವಾದ ಮತ್ತು ಕುಟುಂಬಸ್ಥರ ಮನವಿಗೆ ಒಲಿದ ಮಹಿಳೆ, ತನ್ನ ತಪ್ಪನ್ನು ಅರಿತು ಮತ್ತೆ ಪತಿ ಹಾಗೂ ಮಕ್ಕಳೊಂದಿಗೆ ಸಂಸಾರ ನಡೆಸಲು ಒಪ್ಪಿಕೊಂಡಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಈ ಮಹಿಳೆ ತನ್ನ ಪತಿ ಮತ್ತು ಇಬ್ಬರು ಮಕ್ಕಳನ್ನು ತೊರೆದು ಪ್ರಿಯಕರನ ಜೊತೆ ಕಾರ್ಕಳಕ್ಕೆ ಬಂದು ವಾಸವಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಆತಂಕಗೊಂಡ ಪತಿ ಹಾಗೂ ಕುಟುಂಬಸ್ಥರು ತಕ್ಷಣವೇ ಕಾರ್ಕಳ ಪೊಲೀಸ್ ಠಾಣೆಗೆ ಧಾವಿಸಿ ದೂರು ನೀಡಿದ್ದರು.
ವಿಷಯ ತಿಳಿದ ಕಾರ್ಕಳ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಠಾಣೆಗೆ ಕರೆಸಿ ಕೌನ್ಸೆಲಿಂಗ್ ನಡೆಸಿದ್ದಾರೆ. ಕುಟುಂಬದ ಜವಾಬ್ದಾರಿ, ಮಕ್ಕಳ ಭವಿಷ್ಯ ಮತ್ತು ಸಂಸಾರದ ಮಹತ್ವದ ಬಗ್ಗೆ ಮಹಿಳೆಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪೋಲಿಸರ ಬುದ್ಧಿವಾದ ಮತ್ತು ಕುಟುಂಬಸ್ಥರ ಕಳಕಳಿಯ ಮನವಿಯನ್ನು ಆಲಿಸಿದ ಮಹಿಳೆ, ಕೊನೆಗೂ ತನ್ನ ತಪ್ಪಿನ ಅರಿವು ಮಾಡಿಕೊಂಡಿದ್ದಾರೆ. ಪ್ರಿಯಕರನ ವ್ಯಾಮೋಹ ತೊರೆದು, ತನ್ನ ಪತಿ ಮತ್ತು ಮಕ್ಕಳೊಂದಿಗೆ ಮರಳಿ ಮನೆಗೆ ತೆರಳಿ ಹೊಸ ಜೀವನ ಆರಂಭಿಸಲು ಒಪ್ಪಿಕೊಂಡಿದ್ದಾರೆ.


ಪ್ರಕರಣವು ಇಬ್ಬರ ಒಪ್ಪಿಗೆಯೊಂದಿಗೆ ಠಾಣೆಯಲ್ಲೇ ರಾಜಿಯಲ್ಲಿ ಮುಕ್ತಾಯಗೊಂಡಿದ್ದರಿಂದ, ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.





