ಉಡುಪಿ: ಉಡುಪಿಯಲ್ಲಿ ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ನದಿಯಲ್ಲಿ ಪತ್ತೆಯಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಅಕ್ಟೋಬರ್ 9ರಿಂದ ಕಣ್ಮರೆಯಾಗಿದ್ದ 51 ವರ್ಷದ ಸುರೇಶ್ ಶೆಟ್ಟಿ ಅವರ ಶವ ಕಾರ್ಕಳ ತಾಲೂಕಿನ ಎಣ್ಣೆಹೊಳೆ ಸೇತುವೆಯ ಕೆಳಗಿನ ನದಿಯಲ್ಲಿ ಬುಧವಾರ ಪತ್ತೆಯಾಗಿದೆ.

ಕಣಜಾರು ಗ್ರಾಮದ ಕಡೆಬರ್ಕೆ ನಿವಾಸಿಯಾಗಿದ್ದ ಸುರೇಶ್ ಶೆಟ್ಟಿ ಅವರು ಕಳೆದ ಅಕ್ಟೋಬರ್ 9ರಂದು ಮಧ್ಯಾಹ್ನ ಕಟೀಲಿಗೆ ತೆರಳುವುದಾಗಿ ಹೇಳಿ ಮನೆಯಿಂದ ಹೊರಟಿದ್ದರು. ಆದರೆ, ಅದಾದ ನಂತರ ಅವರು ವಾಪಸ್ ಮನೆಗೆ ಮರಳದೆ ನಾಪತ್ತೆಯಾಗಿದ್ದರು. ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ.”

“ಬುಧವಾರ ಕಾರ್ಕಳ ತಾಲೂಕಿನ ಮರ್ಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಣ್ಣೆಹೊಳೆ ಸೇತುವೆಯ ಕೆಳಭಾಗದ ನದಿಯಲ್ಲಿ ಮೃತದೇಹವೊಂದು ತೇಲುತ್ತಿರುವುದು ಕಂಡುಬಂದಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಸಂಬಂಧಿಕರು, ಮೃತದೇಹ ಸುರೇಶ್ ಶೆಟ್ಟಿ ಅವರದ್ದೇ ಎಂದು ಗುರುತಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಾರ್ಕಳ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯಕ್ಕೆ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆಯನ್ನು ಕಾಯ್ದುಕೊಂಡಿದ್ದಾರೆ.





